ಅಂಡರ್-19 ಬಾಲಕಿಯರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.1 ಸ್ಥಾನಕ್ಕೇರಿದ ಭಾರತದ ಮೊದಲ ಆಟಗಾರ್ತಿ ತಸ್ನೀಮ್ ಮಿರ್

Update: 2022-01-12 16:08 GMT
Twitter/Tasnim Mir

ಹೊಸದಿಲ್ಲಿ, ಜ.12: ಬಿಡಬ್ಲ್ಯುಎಫ್ ಜೂನಿಯರ್ ರ್ಯಾಂಕಿಂಗ್‌ನಲ್ಲಿ 19 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಯುವ ಶಟ್ಲರ್ ತಸ್ನೀಮ್ ಮಿರ್ ವಿಶ್ವದ ನಂ.1 ರ್ಯಾಂಕಿಂಗ್‌ಗೆ ತಲುಪಿದ ಮೊದಲ ಭಾರತೀಯರೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಗುಜರಾತ್‌ನ 16ರ ಹರೆಯದ ಮಿರ್ ಕಳೆದ ವರ್ಷ ತೋರಿರುವ ಅದ್ಭುತ ಪ್ರದರ್ಶನದಿಂದಾಗಿ ಈ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ಮೂರು ಜೂನಿಯರ್ ಅಂತರ್‌ರಾಷ್ಟ್ರೀಯ ಟೂರ್ನಮೆಂಟ್‌ಗಳಲ್ಲಿ ಪ್ರಶಸ್ತಿ ಜಯಿಸಿದ್ದ ಮಿರ್ ಮೂರು ಸ್ಥಾನ ಮೇಲಕ್ಕೇರಿ ಜೂನಿಯರ್ ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದರು.

ಪಿ.ವಿ. ಸಿಂಧು ಹಾಗೂ ಸೈನಾ ನೆಹ್ವಾಲ್ ಕೂಡ ಮಿರ್ ಮಾಡಿರುವ ಸಾಧನೆಯನ್ನು ಮಾಡಿಲ್ಲ. ಅಂಡರ್-19 ವಿಭಾಗದಲ್ಲಿ ಆಡುತ್ತಿದ್ದಾಗ ಸಿಂಧು ವಿಶ್ವದ 2ನೇ ಆಟಗಾರ್ತಿಯಾಗಿದ್ದರು. ಬಾಲಕರ ಸಿಂಗಲ್ಸ್‌ನಲ್ಲಿ ಲಕ್ಷ ಸೇನ್, ಸಿರಿಲ್ ವರ್ಮಾ ಹಾಗೂ ಆದಿತ್ಯ ಜೋಶಿ ವಿಶ್ವದ ನಂ.1 ಆಟಗಾರರಾಗಿ ಹೊರಹೊಮ್ಮಿದ್ದರು.

ಮಿರ್ ಕಳೆದ ವರ್ಷ ಡೆನ್ಮಾರ್ಕ್‌ನಲ್ಲಿ ನಡೆದಿದ್ದ ಥಾಮಸ್ ಹಾಗೂ ಉಬೆರ್ ಕಪ್‌ನಲ್ಲಿ ಭಾರತದ ಅಭಿಯಾನದಲ್ಲಿ ಭಾಗವಹಿಸಿದ್ದರು. ತಸ್ನೀಮ್ ಮಿರ್ ತಂದೆ ಇರ್ಫಾನ್ ಮಿರ್ ಬ್ಯಾಡ್ಮಿಂಟನ್ ಕೋಚ್ ಆಗಿದ್ದು, ಕಿರಿಯ ಸಹೋದರ ಮುಹಮ್ಮದ್ ಅಲಿ ಮಿರ್ ಗುಜರಾತ್ ರಾಜ್ಯ ಜೂನಿಯರ್ ಚಾಂಪಿಯನ್ ಆಗಿದ್ದು, ಗುವಾಹಟಿಯಲ್ಲಿ ಸಹೋದರಿಯೊಂದಿಗೆ ತರಬೇತಿ ಪಡೆದಿದ್ದಾರೆ.

‘‘ನಾನು ಇದನ್ನು ನಿರೀಕ್ಷಿಸಿದ್ದೆ ಎಂದು ಹೇಳಲಾರೆ. ಕೋವಿಡ್-19ನಿಂದಾಗಿ ಟೂರ್ನಮೆಂಟ್‌ಗಳು ಬಾಧಿತವಾಗಿದ್ದ ಕಾರಣ ನಾನು ನಂ.1 ಆಗಲಾರೆ ಎಂದು ಭಾವಿಸಿದ್ದೆ. ಆದರೆ ನಾನು ಬಲ್ಗೇರಿಯ, ಫ್ರಾನ್ಸ್ ಹಾಗೂ ಬೆಲ್ಜಿಯಂನಲ್ಲಿ ಮೂರು ಟೂರ್ನಿಗಳಲ್ಲಿ ಜಯ ಸಾಧಿಸಿದ್ದೆ. ಕೊನೆಗೂ ವಿಶ್ವದ ನಂ.1 ಆಗಿದ್ದಕ್ಕೆ ನಿಜವಾಗಿಯೂ ಸಂತೋಷವಾಗುತ್ತಿದೆ. ನನಗಿದು ಶ್ರೇಷ್ಠ ಕ್ಷಣವಾಗಿದೆ’’ ಎಂದು ಪಿಟಿಐಗೆ ತಸ್ನೀಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News