ಶಂಕಿತ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸೊಮಾಲಿಯಾ ಸರಕಾರದ ವಕ್ತಾರಗೆ ಗಾಯ

Update: 2022-01-16 18:45 GMT

 ಮೊಗದಿಶು, ಜ.16: ಸೊಮಾಲಿಯಾದ ರಾಜಧಾನಿ ಮಗದಿಶುವಿನಲ್ಲಿ ಶಂಕಿತ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸರಕಾರದ ವಕ್ತಾರ ಮುಹಮ್ಮದ್ ಇಬ್ರಾಹಿಂ ಮೊವಾಲಿಮು ಗಾಯಗೊಂಡಿರುವುದಾಗಿ ಸರಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

 ಮುಹಮ್ಮದ್ ಇಬ್ರಾಹಿಂ ಅವರ ನಿವಾಸದ ಹೊರಗಡೆ ದೇಹದ ಭಾಗಗಳು ಚಲ್ಲಾಪಿಲ್ಲಿಯಾಗಿ ಹರಡಿದ್ದವು. ಸ್ಫೋಟದಲ್ಲಿ ಗಾಯಗೊಂಡ ಮುಹಮ್ಮದ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಫೋಟ ನಡೆದ ಸ್ಥಳದಲ್ಲಿದ್ದ ಫೋಟೋಗ್ರಾಫರ್ ವರದಿ ಮಾಡಿದ್ದಾರೆ.

ಮೊಗದಿಶು ಜಂಕ್ಷನ್ ರಸ್ತೆಯಲ್ಲಿ ನಡೆದಿರುವ ಸ್ಫೋಟಕ್ಕೆ ಆತ್ಮಹತ್ಯಾ ಬಾಂಬರ್ ಕಾರಣ. ಸರಕಾರದ ವಕ್ತಾರರನ್ನು ಗುರಿಯಾಗಿಸಿದ ಈ ದಾಳಿಯಲ್ಲಿ ಸೊಂಟದ ಬೆಲ್ಟ್ನಲ್ಲಿ ಸ್ಫೋಟಕ ಸಿಕ್ಕಿಸಿಕೊಂಡಿದ್ದ ದಾಳಿಕೋರ, ಮುಹಮ್ಮದ್ ಇಬ್ರಾಹಿಂ ಮನೆಯಿಂದ ಹೊರಬರುತ್ತಿದ್ದಂತೆಯೇ ಅವರ ಬಳಿ ತೆರಳಿ ಸ್ಫೋಟಿಸಿಕೊಂಡಿದ್ದಾನೆ ಎಂದು ಪೊಲೀಸ್ ವಕ್ತಾರ ಅಬ್ದಿಫತಾಹ್ ಅದೆನ್ರನ್ನು ಉಲ್ಲೇಖಿಸಿ ರಾಯ್ಟರ್ಸ್ ಸುದ್ಧಿಸಂಸ್ಥೆ ವರದಿ ಮಾಡಿದೆ.


ಸ್ಫೋಟದಲ್ಲಿ ಇಬ್ರಾಹಿಂಗೆ ಗಂಭೀರ ಗಾಯವಾಗಿಲ್ಲ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ . ಈ ಹಿಂದೆಯೂ ಇಬ್ರಾಹಿಂ ಅವರ ಹತ್ಯೆಗೆ ಪ್ರಯತ್ನ ನಡೆದಿದೆ ಎಂದು ಪ್ರಧಾನಿ ಕಚೇರಿಯ ವಿಶೇಷ ಮಾಧ್ಯಮ ಪ್ರತಿನಿಧಿ ನಸ್ರಾ ಬಾಶಿರ್ ಆಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News