ಜಗತ್ತಿನಾದ್ಯಂತ ವಿಮಾನಯಾನ ಸಂಸ್ಥೆಗಳಿಗೆ ಆತಂಕ ಮೂಡಿಸಿದ ವಿಮಾನ ನಿಲ್ದಾಣ ಸಮೀಪದ 5ಜಿ ಟವರ್‌ಗಳು

Update: 2022-01-19 06:25 GMT
Photo credit: Bloomberg

ಹೊಸದಿಲ್ಲಿ: ಅಮೆರಿಕಾದಲ್ಲಿ ವಿಮಾನ ನಿಲ್ದಾಣಗಳ ಸಮೀಪ ಎಟಿ&ಟಿ ಇಂಕ್‌ ಮತ್ತು ವೆರಿಝಾನ್‌ ಕಮ್ಯುನಿಕೇಶನ್ಸ್‌ ಇಂಕ್.‌ ಸಂಸ್ಥೆಗಳು ಕರ‍್ಯರೂಪಕ್ಕೆ ತರಲಿರುವ 5ಜಿ ಇಂಟನೆಟ್‌ ಸೇವೆ ಆರಂಭಗೊಳಿಸುವಿಕೆಯು ವಿಮಾನಗಳ ಪ್ರಮುಖ ಸುರಕ್ಷತಾ ವ್ಯವಸ್ಥೆಗಳಲ್ಲಿ ಹಸ್ತಕ್ಷೇಪ ನಡೆಸುವ ಸಾಧ್ಯತೆಯಿರುವುದರಿಂದ ಜಗತ್ತಿನಾದ್ಯಂತ ವಿಮಾನಯಾನ ಸಂಸ್ಥೆಗಳು ಅಮೆರಿಕಾಗೆ ತಮ್ಮ ಸೇವೆಗಳ ವೇಳಾಪಟ್ಟಿ ಹಾಗೂ ನಿಯೋಜಿಸುವ ವಿಮಾನಗಳಿಗೆ ಸಂಬಂಧಿಸಿದಂತೆ ಕೆಲವೊಂದು ಹೊಂದಾಣಿಕೆಗಳನ್ನು ಮಾಡುತ್ತಿವೆ.

ಅಮೆರಿಕಾದ ಚಿಕಾಗೋ, ಸ್ಯಾನ್‌ ಫ್ರಾನ್ಸಿಸ್ಕೋ, ಸಹಿತ ಹಲವು ನಗರಗಳಿಗೆ ವಿಮಾನಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಎಮಿರೇಟ್ಸ್‌ ಏರ್‌ಲೈನ್‌ ಹೇಳಿದ್ದರೆ, ಜಪಾನ್‌ ಏರ್‌ಲೈನ್ಸ್‌ ಮತ್ತು ಎಎನ್‌ಎ ಹೋಲ್ಡಿಂಗ್ಸ್‌ ತಾವು ಕೆಲವೊಂದು ವಾಯು ಮಾರ್ಗಗಳಲ್ಲಿ ಸಂಚರಿಸುವುದನ್ನು ನಿಲ್ಲಿಸುವುದಾಗಿ ಹಾಗೂ ಬೋಯಿಂಗ್‌ ಸಂಸ್ಥೆ ಎಚ್ಚರಿಕೆ ನಂತರ ತಮ್ಮ 777 ಜೆಟ್‌ಗಳನ್ನು ಅಮೆರಿಕಾದಲ್ಲಿ ಹಾರಾಟ ನಡೆಸುವುದಿಲ್ಲ ಎಂದು ಹೇಳಿವೆ.

ತನ್ನ 777 ಮತ್ತು 746-8 ವಿಮಾನಗಳು ಕೂಡ ಬಾಧಿತವಾಗಬಹುದು ಎಂದು ಹೇಳಿರುವ ಕೊರಿಯನ್‌ ಏರ್‌ಲೈನ್ಸ್‌ ಸಂಸ್ಥೆ ಕೂಡ ಕೆಲವೊಂದು ಬದಲಾವಣೆಗಳನ್ನು ಮಾಡಲಿದ್ದರೆ, ಏರ್‌ ಇಂಡಿಯಾ ಕೂಡ ಜನವರಿ 19ರಿಂದ ಅಮೆರಿಕಾಗೆ ಕೆಲವೊಂದು ವಿಮಾನಸೇವೆಗಳನ್ನು ಕಡಿಮೆಗೊಳಿಸಬಹುದದು ಅಥವಾ ಪರಿಷ್ಕರಣೆಗೊಳಗಾಗಬಹುದು ಹೇಳಿದೆ.

5ಜಿ ತರಂಗಾಂತರಗಳು ಪ್ರತಿಕೂಲ ಹವಾಮಾನ ವೇಳೆ ಅಗತ್ಯವಿರುವ ವಿಮಾನಗಳ ಸೂಕ್ಷ್ಮ ನೇವಿಗೇಷನ್‌ ವ್ಯವಸ್ಥೆಗೆ ಅಡ್ಡಿಯುಂಟು ಮಾಡುವ ಭೀತಿಯಿದೆ. 5ಜಿ ಸೇವೆಗಳಿಗೆ ಬಳಸಲಾಗುವ ಸಿ-ಬ್ಯಾಂಡ್‌  ವಿಮಾನಗಳ ರಾಡಾರ್‌  ಆಲ್ಟಿಮೀಟರ್‌ಗಳು ಬಳಸುವ ತರಂಗಾಂತರಗಳ ಸಮೀಪವೇ ಇರುವುದರಿಂದ ಸಮಸ್ಯೆ ಎದುರಾಗಬಹುದೆಂಬ ಭಯ ಮೂಡಿದೆ.

ಆದರೆ ಮಂಗಳವಾರ ಎರಡೂ ಸಂಸ್ಥೆಗಳು ಅಮೆರಿಕಾ ವಿಮಾನ ನಿಲ್ದಾಣಗಳ ಸಮೀಪ ತಮ್ಮ 5ಜಿ ಸೆಲ್‌ ಟವರ್‌ಗಳನ್ನು ಸ್ವಿಚ್‌ ಆನ್‌ ಮಾಡುವುದನ್ನು ವಿಳಂಬಿಸಲು ಒಪ್ಪಿವೆ. ಆದರೆ ಹೀಗೆ ಎಷ್ಟು ಸಮಯ ಮಾಡಬಹುದೆಂಬ ಕುರಿತು ಸ್ಪಷ್ಟತೆಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News