ಸುನಾಮಿಯಿಂದ ಕಂಗೆಟ್ಟ ತೋಂಗಾ ದೇಶಕ್ಕೆ ಅಂತರಾಷ್ಟ್ರೀಯ ಸಮುದಾಯದ ನೆರವಿನ ಹಸ್ತ

Update: 2022-01-21 17:17 GMT
photo:PTI

ನುಕುವಲೋಫ, ಜ.21: ವಿನಾಶಕಾರಿ ಜ್ವಾಲಾಮುಖಿ ಸ್ಫೋಟ ಮತ್ತು ಸುನಾಮಿಯಿಂದ ಜರ್ಜರಿತಗೊಂಡು ತೀವ್ರ ಆಹಾರ ಮತ್ತು ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ತೋಂಗಾ ದ್ವೀಪರಾಷ್ಟ್ರಕ್ಕೆ ಅಂತರಾಷ್ಟ್ರೀಯ ನೆರವು ಹರಿದು ಬರುತ್ತಿದ್ದು ಗುರುವಾರ ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್ ದೇಶಗಳು ವಿಮಾನದ ಮೂಲಕ ಅಗತ್ಯವಿರುವ ವಸ್ತುಗಳನ್ನು ಒದಗಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತೋಂಗಾ ದೇಶದ ತುರ್ತು ನೆರವಿನ ಕೋರಿಕೆಯನ್ನು ಪರಿಗಣಿಸಿರುವ ಅಂತರಾಷ್ಟ್ರೀಯ ಸಮುದಾಯ ನೆರವಿಗೆ ಧಾವಿಸಿದ್ದು ಮುಂದಿನ ದಿನಗಳಲ್ಲಿ ಹಡಗು ಮತ್ತು ವಿಮಾನಗಳ ಮೂಲಕ ಇನ್ನಷ್ಟು ಅಗತ್ಯವಸ್ತುಗಳು ಪೂರೈಕೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ, ಗುರುವಾರ ನ್ಯೂಝಿಲ್ಯಾಂಡ್‌ನ ಹಡಗಿನ ಮೂಲಕ 2,50,000 ಲೀಟರ್ ನೀರು ಹಾಗೂ ದಿನಕ್ಕೆ 70,000 ಲೀಟರ್ ನೀರು ಉತ್ಪಾದಿಸುವ ಉಪ್ಪು ಹಿಂಗಿಸುವ ಘಟಕವನ್ನು ತೋಂಗಾಕ್ಕೆ ರವಾನಿಸಲಾಗಿದೆ. ಜತೆಗೆ, ತಾತ್ಕಾಲಿಕ ವಸತಿ ನಿರ್ಮಿಸುವ ಸಾಧನ, ಸಂವಹನ ಸಾಧನ ಹಾಗೂ ವಿದ್ಯುತ್ ಜನರೇಟರ್‌ಗಳನ್ನೂ ಒದಗಿಸಲಾಗಿದೆ. ದೈನಂದಿನ ಬಳಕೆಯ ವಸ್ತುಗಳನ್ನು ಹೊತ್ತು ತಂದ ಆಸ್ಟ್ರೇಲಿಯಾದ ವಿಮಾನ ತಾಂತ್ರಿಕ ದೋಷದಿಂದ ಮಾರ್ಗಮಧ್ಯೆಯೇ ಹಿಂತಿರುಗಿದ್ದು ಶುಕ್ರವಾರ ತೋಂಗಾಕ್ಕೆ ರವಾನೆಯಾಗಲಿದೆ ಎಂದು ತೋಂಗಾದಲ್ಲಿನ ಆಸ್ಟ್ರೇಲಿಯಾ ಹೈಕಮಿಷನರ್ ಹೇಳಿದ್ದಾರೆ. ನೀರು ಸಹಿತ ಅಗತ್ಯ ನೆರವಿನ ಸಾಮಾಗ್ರಿಗಳನ್ನು ಜಪಾನ್‌ನ 2 ವಿಮಾನಗಳ ಮೂಲಕ ರವಾನಿಸಲಾಗಿದೆ.

ತೋಂಗಾದಿಂದ ತುರ್ತು ನೆರವಿನ ಕೋರಿಕೆಯ ಹಿನ್ನೆಲೆಯಲ್ಲಿ ಅಲ್ಲಿನ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡ್ಯುಜರಿಕ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಪರಾಮರ್ಶೆ ಮತ್ತು ಪರಿಶೀಲನೆಗೆ ವಿಶ್ವಸಂಸ್ಥೆಯ ತಂಡವನ್ನು ಆ ದೇಶಕ್ಕೆ ರವಾನಿಸಲಾಗಿದೆ. ದೇಶದಲ್ಲಿ ಕನಿಷ್ಟ 50,000 ಮಂದಿಗೆ ನೀರಿನ ತೀವ್ರ ಕೊರತೆ ಎದುರಾಗಿದ್ದು ಹೆಚ್ಚಿನವರು ಬಾಟಲಿಯ ಮೂಲಕ ಪೂರೈಸುವ ನೀರನ್ನು ಅವಲಂಬಿಸಿದ್ದಾರೆ. ಜ್ವಾಲಾಮುಖಿಯಿಂದ ಹಾರಿದ ಬೂದಿ, ಉಪ್ಪುನೀರು ನುಗ್ಗಿರುವುದು, ಆಸಿಡ್ ಮಳೆಯಿಂದಾಗಿ ಬೆಳೆನಾಶ, ಜಾನುವಾರು ನಾಶ, ಮೀನುಗಾರಿಕೆಗೆ ತೊಡಕು ಮುಂತಾದ ಸಮಸ್ಯೆಯಿಂದ 60,000ದಷ್ಟು ಜನ ತೊಂದರೆಗೊಳಗಾಗಿದ್ದಾರೆ ಜೊತೆಗೆ ತೈಲದ ತೀವ್ರ ಕೊರತೆ ಎದುರಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ತೋಂಗಾ ದೇಶಕ್ಕೆ ನಗದು ನೆರವಿನ ಅಗತ್ಯವಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ 1 ಮಿಲಿಯನ್ ಡಾಲರ್ ಒದಗಿಸಿದೆ. ದೇಶದ ಮರುನಿರ್ಮಾಣ ಕಾರ್ಯಕ್ಕೆ ಅಂತರಾಷ್ಟ್ರೀಯ ಸಮುದಾಯ ಆರ್ಥಿಕ ನೆರವನ್ನೂ ಒದಗಿಸಬೇಕಿದೆ ಎಂದು ಆಸ್ಟ್ರೇಲಿಯಾದ ವಿದೇಶ ಸಚಿವ ಮಾರಿಸ್ ಪೇಯ್ನೆ ಶುಕ್ರವಾರ ಹೇಳಿದ್ದಾರೆ.

ತೋಂಗಾದಲ್ಲಿ ಶನಿವಾರ ಸಮುದ್ರದಡಿ ಜ್ವಾಲಾಮುಖಿ ಸ್ಫೋಟಿಸಿದ್ದರಿಂದ ಸುನಾಮಿ ಎದ್ದಿದ್ದು ಹಲವು ಗ್ರಾಮಗಳಿಗೆ ನೆರೆನೀರು ನುಗ್ಗಿದೆ. ಜತೆಗೆ ಹಲವು ಕಟ್ಟಡಗಳು ನೆಲಸಮಗೊಂಡಿದ್ದು ಕೃಷಿ ಭೂಮಿಗೆ ಸಮುದ್ರದ ಉಪ್ಪುನೀರು ನುಗ್ಗಿ ವ್ಯಾಪಕ ಬೆಳೆನಷ್ಟವಾಗಿದ್ದು ಕನಿಷ್ಟ 3 ಮಂದಿ ಮೃತಪಟ್ಟಿರುವುದಾಗಿ ಸರಕಾರ ಮಾಹಿತಿ ನೀಡಿದೆ. ತೋಂಗಾ ದೇಶವನ್ನು ಹೊರಜಗತ್ತಿನೊಂದಿಗೆ ಸಂಪರ್ಕಿಸುವ ಟೆಲಿಫೋನ್ ಸಂಪರ್ಕವನ್ನು ಬುಧವಾರ ಮರುಸ್ಥಾಪಿಸಲಾಗಿದೆ. ಆದರೆ, ಇಂಟರ್‌ನೆಟ್ ಸಂಪರ್ಕ ವ್ಯವಸ್ಥೆಯನ್ನು ಸುಸ್ಥಿತಿಗೆ ತರಲು ಹಲವು ದಿನಗಳು ಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News