ಇರಾಕ್ ಸೇನಾನೆಲೆಯ ಮೇಲೆ ದಾಳಿ: 11 ಸೈನಿಕರ ಹತ್ಯೆ

Update: 2022-01-21 17:46 GMT
ಸಾಂದರ್ಭಿಕ ಚಿತ್ರ:PTI

ಬಗ್ದಾದ್, ಜ.21: ಇರಾಕ್‌ನ ದಿಯಾಲಾ ಪ್ರಾಂತದಲ್ಲಿ ಇರಾಕ್ ಸೇನಾನೆಲೆಯ ಮೇಲೆ ಶುಕ್ರವಾರ ನಸುಕಿನ ವೇಳೆ ದಾಳಿ ನಡೆಸಿದ ಶಂಕಿತ ಐಸಿಸ್ ಉಗ್ರರು ನಿದ್ದೆಯಲ್ಲಿದ್ದ 11 ಇರಾಕ್ ಸೈನಿಕರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ಬಾಗ್ದಾದ್‌ನ 120 ಕಿಮೀ ದೂರದ ಪರ್ವತ ಪ್ರದೇಶ ಅಲ್‌ಅಝೀಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ದಾಳಿಯ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ. ಆದರೆ ಶುಕ್ರವಾರ ಬೆಳಿಗ್ಗೆ 3 ಗಂಟೆ ವೇಳೆ ನಡೆದಿರುವ ಈ ದಾಳಿಯನ್ನು ಐಸಿಸ್ ಉಗ್ರರು ನಡೆಸಿದ್ದಾರೆ ಎಂದು ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ದಿ ಅಸೋಸಿಯೇಟೆಡ್ ಪ್ರೆಸ್‌ನ್ಯೂಸ್ ವರದಿ ಮಾಡಿದೆ.

ಸೇನಾನೆಲೆಯ ಮೇಲಿನ ದಾಳಿಯ ಮಾಹಿತಿ ಲಭಿಸಿದೊಡನೆ ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ಇತ್ತೀಚಿನ ತಿಂಗಳಲ್ಲಿ ಇರಾಕ್ ಸೇನೆಯ ಮೇಲೆ ನಡೆದ ಅತ್ಯಂತ ಮಾರಣಾಂತಿಕ ದಾಳಿ ಪ್ರಕರಣ ಇದಾಗಿದೆ. 2014ರಲ್ಲಿ ಸಿರಿಯಾ ಮತ್ತು ಇರಾಕ್‌ನ ಹಲವು ಪ್ರದೇಶಗಳನ್ನು ಐಸಿಸ್ ಉಗ್ರರು ನಿಯಂತ್ರಣಕ್ಕೆ ಪಡೆದಿದ್ದರು. ಆದರೆ 2017ರಲ್ಲಿ ಐಸಿಸ್ ಪಡೆಯನ್ನು ಹಿಮ್ಮೆಟ್ಟಿಸಲಾಗಿದ್ದರೂ ಹಲವು ಪ್ರದೇಶಗಳಲ್ಲಿ ಸ್ಲೀಪರ್ ಸೆಲ್‌ಗಳ(ರಹಸ್ಯ ಕಾರ್ಯಪಡೆ) ಮೂಲಕ ಇನ್ನೂ ಸಕ್ರಿಯವಾಗಿಯೇ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ತಿಂಗಳು ಉತ್ತರ ಇರಾಕ್‌ನ ಗ್ರಾಮವೊಂದರ ಮೇಲೆ ಐಸಿಸ್ ನಡೆಸಿದ್ದ ದಾಳಿಯಲ್ಲಿ ಕನಿಷ್ಟ 10 ಮಂದಿ ಮೃತಪಟ್ಟಿದ್ದರು. ಕಳೆದ ಅಕ್ಟೋಬರ್‌ನಲ್ಲಿ ದಿಯಾಲಾ ಪ್ರಾಂತದ ಮೇಲೆ ನಡೆಸಿದ್ದ ದಾಳಿಯಲ್ಲಿ 11 ನಾಗರಿಕರು ಮೃತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News