ಯೆಮನ್ ನ ಕಾರಾಗೃಹದ ಮೇಲೆ ವೈಮಾನಿಕ ದಾಳಿ: ಕನಿಷ್ಠ 70 ಮಂದಿ ಸಾವು

Update: 2022-01-21 18:28 GMT
Photo : PTI

ಸನಾ, ಜ. 21: ಯೆಮನ್ ನಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಸಂಘರ್ಷವು ಶುಕ್ರವಾರ ಉಲ್ಬಣಾವಸ್ಥೆಗೆ ತಲುಪಿದ್ದು, ಕಾರಾಗೃಹವೊಂದರ ಮೇಲೆ ಸೌದಿ ಅರೇಬಿಯ ನೇತೃತ್ವದ ಸೇನಾಮೈತ್ರಿಕೂಟ ನಡೆಸಿದ ವೈಮಾನಿಕ ಬಾಂಬ್ ದಾಳಿಯಲ್ಲಿ 70 ಮಂದಿ ಸಾವನ್ನಪ್ಪಿದ್ದಾರೆ. ಇನ್ನೊಂದು ಪ್ರತ್ಯೇಕ ಬಾಂಬ್ ದಾಳಿಯಲ್ಲಿ ಮೂವರು ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಯೆಮನ್ ನ ಉತ್ತರದಲ್ಲಿರುವ ಸದಾ ನಗರದಲ್ಲಿ ನಡೆದ ವೈಮಾನಿಕ ಬಾಂಬ್ ದಾಳಿಯಲ್ಲಿ ನೆಲಸಮಗೊಂಡ ಕಾರಾಗೃಹ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿರುವ ಮೃತದೇಹಗಳನ್ನು ಪ್ರದರ್ಶಿಸುವ ವೀಡಿಯೊ ದೃಶ್ಯಗಳನ್ನು ಹೌದಿ ಬಂಡುಕೋರರು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ. ದಕ್ಷಿಣ ಬಂದರು ನಗರ ಹುದೈದಲ್ಲಿರುವ ಟೆಲಿಕಮ್ಯುನಿಕೇಷನ್ ಸ್ಥಾವರವೊಂದರ ಮೇಲೆ ಸೌದಿ ಅರೇಬಿಯಾ ನೇತೃತ್ವದ ಸೇನಾ ಮೈತ್ರಿಕೂಟ ವೈಮಾನಿಕ ಬಾಂಬ್ ದಾಳಿ ನಡೆಸಿದ ಪರಿಣಾಮ ಸ್ಥಾವರದ ಸಮೀಪ ಆಟವಾಡುತ್ತಿದ್ದ ಮೂವರು ಮಕ್ಕಳು ಮೃತಪಟ್ಟಿದ್ದಾರೆ ಎಂದು ‘ಸೇವ್ ದಿ ಚಿಲ್ಡ್ರನ್’ ಸಂಸ್ಥೆ ತಿಳಿಸಿದೆ.

ದಾಳಿಯಿಂದ ಯೆಮನ್ ದೇಶಾದ್ಯಂತ ಇಂಟರ್ನೆಟ್ ಸ್ಥಗಿತಗೊಂಡಿದೆ. ಹೌದಿ ಬಂಡುಕೋರರು ಮಂಗಳವಾರ ಅಬುಧಾಬಿಯ ಮೇಲೆ ದಾಳಿ ನಡೆಸಿದ ಬಳಿಕ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ಅರೇಬಿಯಾ ನೇತೃತ್ವದ ಸೇನಾ ಮೈತ್ರಿಕೂಟದ ಭಾಗವಾಗಿರುವ ಯುಎಇ ಪ್ರತೀಕಾರದ ಬೆದರಿಕೆ ಒಡ್ಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News