"ಸ್ಪಾಟ್ ಫಿಕ್ಸಿಂಗ್ ಗಾಗಿ ಭಾರತದ ಬುಕ್ಕಿ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಿದ್ದ": ನಿಷೇಧದ ಕುರಿತು ಬ್ರೆಂಡನ್ ಟೇಲರ್

Update: 2022-01-24 12:35 GMT
Photo: twitter

ಹರಾರೆ, ಜ.24: ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗುವಂತೆ ಭಾರತ ಬುಕ್ಕಿಯೊಬ್ಬ ನನ್ನನ್ನು ಸಂಪರ್ಕಿಸಿದ್ದ. ನಾನು ಕೊಕೇನ್ ಸ್ವೀಕರಿಸುತ್ತಿದ್ದ ವೀಡಿಯೊವನ್ನು ಸೋರಿಕೆ ಮಾಡುವುದಾಗಿ ಬೆದರಿಸುವ ಮೂಲಕ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಐಸಿಸಿಗೆ ಸರಿಯಾದ ಸಮಯಕ್ಕೆ ಈ ಕುರಿತು ನಾನು ಮಾಹಿತಿ ನೀಡದೇ ಇರುವುದಕ್ಕೆ ನಿಷೇಧ ಎದುರಿಸುತ್ತಿದ್ದೇನೆ ಎಂದು ಝಿಂಬಾಬ್ವೆ ಮಾಜಿ ನಾಯಕ  ಬ್ರೆಂಡನ್ ಟೇಲರ್ ಹೇಳಿದ್ದಾರೆ.

ಸ್ಪಾಟ್ ಫಿಕ್ಸಿಂಗ್‌ಗಾಗಿ 15,000 ಡಾಲರ್ "ಠೇವಣಿ" ಪಡೆದಿದ್ದೇನೆ ಎಂದು ಒಪ್ಪಿಕೊಂಡ ನಂತರ ಝಿಂಬಾಬ್ವೆ ಬ್ಯಾಟ್ಸ್‌ಮನ್ ಬ್ರೆಂಡನ್ ಟೇಲರ್ ಅವರು ಅಂತರ್ ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಂದ ನಿಷೇಧವನ್ನು ಎದುರಿಸುತ್ತಿದ್ದಾರೆ. ಆದರೂ ತಾನು  ಬ್ಲ್ಯಾಕ್‌ಮೇಲ್ ಒಳಗಾಗಿದ್ದು, ಈ ರೀತಿ ಎಂದಿಗೂ ಮಾಡಿಲ್ಲ ಎಂದು ಅವರು  ಹೇಳಿದ್ದಾರೆ.

2019 ರ ಅಕ್ಟೋಬರ್‌ನಲ್ಲಿ ಭಾರತೀಯ ಉದ್ಯಮಿಯೊಬ್ಬರಿಂದ ಹಣವನ್ನು ಸ್ವೀಕರಿಸಲು ಒತ್ತಾಯಿಸಲಾಯಿತು ಹಾಗೂ  ತನ್ನ ಸುರಕ್ಷತೆಯ ಬಗ್ಗೆ ಭೀತಿ ಇದ್ದ ಕಾರಣ ಐಸಿಸಿ ಭ್ರಷ್ಟಾಚಾರ ವಿರೋಧಿ ಘಟಕಕ್ಕೆ ಘಟನೆಯನ್ನು ವರದಿ ಮಾಡಲು ನಾಲ್ಕು ತಿಂಗಳುಗಳನ್ನು ತೆಗೆದುಕೊಂಡಿದ್ದೇನೆ ಎಂದು ಟೇಲರ್ ಹೇಳಿದರು.

15,000 ಡಾಲರ್ ಪಾವತಿಯಾಗಿ ನೀಡುವ ಭರವಸೆಯೊಂದಿಗೆ ಝಿಂಬಾಬ್ವೆಯಲ್ಲಿ ಹೊಸ ಟ್ವೆಂಟಿ-20 ಸ್ಪರ್ಧೆಯ ಆರಂಭದ ಕುರಿತು ಚರ್ಚಿಸಲು ಟೇಲರ್ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು.

"ನಾವು ಪಾನೀಯಗಳನ್ನು ಸೇವಿಸಿದ್ದೇವೆ ಹಾಗೂ ಸಂಜೆಯ ಸಮಯದಲ್ಲಿ, ಆತ  ನನಗೆ ಕೊಕೇನ್ ಅನ್ನು ಬಹಿರಂಗವಾಗಿ ನೀಡಿದ, ಆತ  ಕೂಡ ಅದನ್ನು ಸೇವಿಸಿದ. ನಾನು ಮೂರ್ಖತನದಿಂದ ಆಮಿಷಕ್ಕೆ ಒಳಗಾದೆ. ಮರುದಿನ ಬೆಳಿಗ್ಗೆ  ಅದೇ ವ್ಯಕ್ತಿ  ನನ್ನ ಹೋಟೆಲ್ ಕೋಣೆಗೆ ನುಗ್ಗಿದ ಹಾಗೂ  ಕೊಕೇನ್ ತೆಗೆದುಕೊಳ್ಳುವ ಹಿಂದಿನ ರಾತ್ರಿ ತೆಗೆದ ನನ್ನ ವೀಡಿಯೊವನ್ನು ನನಗೆ ತೋರಿಸಿದ ಹಾಗೂ  ನಾನು ಆತನಿಗಾಗಿ ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ ಸ್ಪಾಟ್-ಫಿಕ್ಸ್ ಮಾಡದಿದ್ದರೆ ವೀಡಿಯೊವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಬೆದರಿಸಿದ'' ಎಂದು ಟ್ವಿಟರ್ ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಟೇಲರ್ ತಿಳಿಸಿದ್ದಾರೆ.

ಭಾರತದ ಉದ್ಯಮಿ   ತನಗೆ ಠೇವಣಿಯಾಗಿ 15,000 ಡಾಲರ್ ಹಸ್ತಾಂತರಿಸಿದ್ದ. ಕೆಲಸ ಪೂರ್ಣಗೊಂಡ ನಂತರ  ತನ್ನಿಂದ  ಇನ್ನೂ 20,000 ಡಾಲರ್ ಪಡೆಯಲಿರುವುದಾಗಿ ಭರವಸೆ ನೀಡಿದ್ದ. ನಾನು ಯಾವುದೇ ರೀತಿಯ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಎಂದಿಗೂ ಭಾಗಿಯಾಗಿಲ್ಲ. ನಾನು ಮೋಸಗಾರನಲ್ಲ" ಎಂದು ಅವರು ಹೇಳಿದರು.

ನನ್ನ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಮೇಲೆ ಬಹು ವರ್ಷಗಳ ನಿಷೇಧವನ್ನು ಹೇರುವ ನಿರ್ಧಾರವನ್ನು ಐಸಿಸಿ ತೆಗೆದುಕೊಳ್ಳುತ್ತಿದೆ ಎಂದು ಹೇಳಲಾಗುತ್ತದೆ. ನಾನು ಈ ನಿರ್ಧಾರವನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ ಎಂದು ಟೇಲರ್ ಹೇಳಿದರು.

ಝಿಂಬಾಬ್ವೆ ಪರ 34 ಟೆಸ್ಟ್, 205 ಏಕದಿನ ಹಾಗೂ 45 ಟ್ವೆಂಟಿ-20 ಪಂದ್ಯಗಳಲ್ಲಿ ಆಡಿರುವ 35ರ ಹರೆಯದ ಟೇಲರ್ ಸೆಪ್ಟೆಂಬರ್‌ನಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.

ಝಿಂಬಾಬ್ವೆಯ ಮಾಜಿ ಆಲ್‌ರೌಂಡರ್ ಹಾಗೂ ಕೋಚ್ ಹೀತ್ ಸ್ಟ್ರೀಕ್ ಅವರನ್ನು ಬೆಟ್ಟಿಂಗ್ ಉದ್ದೇಶಗಳಿಗಾಗಿ ಬಳಸಬಹುದಾದ ಆಂತರಿಕ ಮಾಹಿತಿಯನ್ನು ಬಹಿರಂಗಪಡಿಸಿದ ಕಾರಣಕ್ಕಾಗಿ ಕಳೆದ ಎಪ್ರಿಲ್‌ನಲ್ಲಿ ಐಸಿಸಿ ಎಂಟು ವರ್ಷಗಳ ಕಾಲ ನಿಷೇಧಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News