×
Ad

ಮಿಕ್ಸೆಡ್‌ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ ನಲ್ಲಿ ಸೋಲು: ಆಸ್ಟ್ರೇಲಿಯನ್‌ ಓಪನ್ ಅಭಿಯಾನ ಅಂತ್ಯಗೊಳಿಸಿದ ಸಾನಿಯಾ ಮಿರ್ಝಾ

Update: 2022-01-25 12:57 IST
Photo: Twitter

ಮೆಲ್ಬೋರ್ನ್: ಮಂಗಳವಾರ ಇಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್‌ನ  ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸ್ಥಳೀಯ ಜೋಡಿ ಜೈಮಿ ಫೋರ್ಲಿಸ್ ಮತ್ತು ಜೇಸನ್ ಕುಬ್ಲರ್ ವಿರುದ್ಧ ಕ್ವಾರ್ಟರ್‌ಫೈನಲ್ ನಲ್ಲಿ ಸೋಲನುಭವಿಸುವ ಮೂಲಕ ತಮ್ಮ ಅಭಿಯಾನ ಅಂತ್ಯಗೊಳಿಸಿದ್ದಾರೆ.

ಮಿರ್ಝಾ, ಅಮೆರಿಕದ ಟೆನಿಸ್‌ ತಾರೆ ರಾಜೀವ್ ರಾಮ್ ರೊಂದಿಗೆ, ಒಂದು ಗಂಟೆ 30 ನಿಮಿಷಗಳ ಅವಧಿಯಲ್ಲಿ ವೈಲ್ಡ್‌ಕಾರ್ಡ್ ಎಂಟ್ರಿಗಳಾದ ಫೋರ್ಲಿಸ್ ಮತ್ತು ಕುಬ್ಲರ್ ವಿರುದ್ಧ 4-6, 6-7 ರಿಂದ ಪಂದ್ಯವನ್ನು ಸೋತರು. 35 ವರ್ಷದ ಸಾನಿಯಾ ಮಿರ್ಝಾ ಅವರು ಮೂರು ಮಿಶ್ರ ಡಬಲ್ಸ್ ಟ್ರೋಫಿಗಳನ್ನು ಒಳಗೊಂಡಂತೆ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದು ದೇಶದ ಕೀರ್ತಿ ಪತಾಕೆ ಎತ್ತಿಹಿಡಿದಿದ್ದರು.

ಕಳೆದ ವಾರ ನಡೆದ ಮಹಿಳೆಯರ ಡಬಲ್ಸ್ ಈವೆಂಟ್‌ನಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ ಬಳಿಕ ಅವರು ತಮ್ಮ ಸಾಧನೆಯ ಮುಕುಟಕ್ಕೆ ಎರಡನೇ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಯ ಗರಿಯನ್ನು ಸೇರಿಸುವ ಗುರಿ ಹೊಂದಿದ್ದರು.

ಈ ಋತುವಿನ ಕೊನೆಯಲ್ಲಿ ನಿವೃತ್ತಿ ಹೊಂದುವುದಾಗಿ ಇತ್ತೀಚೆಗೆ ಘೋಷಿಸಿದ ಮಿರ್ಝಾಗೆ ಮೆಲ್ಬೋರ್ನ್ ಉದ್ಯಾನವನವು ಹಲವು ಸಾಧನೆಗಳ ತಾಣವಾಗಿದೆ. ಆಕೆಯ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳಲ್ಲಿ ಎರಡು ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೂಡಿಬಂದಿತ್ತು.

2009 ರಲ್ಲಿ ಮಹೇಶ್ ಭೂಪತಿ ಅವರೊಂದಿಗೆ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಲ್ಲದೆ, ಮಿರ್ಝಾ ಅವರು 2016 ರಲ್ಲಿ ಖ್ಯಾತ ಟೆನಿಸ್‌ ತಾರೆ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಮಹಿಳೆಯರ ಡಬಲ್ಸ್ ಟ್ರೋಫಿ ಗೆದ್ದುಕೊಂಡಿದ್ದರು. ಇದು ಅವರ ಕೊನೆಯ ಗ್ರ್ಯಾಂಡ್ ಸ್ಲಾಮ್ ಗೆಲುವು ಕೂಡ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News