×
Ad

ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ಹುದ್ದೆಗೆ ಟೆಡ್ರೋಸ್ ಗೆಬ್ರಯೇಸಸ್ ಏಕೈಕ ಅಭ್ಯರ್ಥಿ

Update: 2022-01-26 23:11 IST
ಟೆಡ್ರೋಸ್ ಗೆಬ್ರಯೇಸಸ್(file photo:PTI)

ಜಿನೆವಾ, ಜ.26: ಮಂಗಳವಾರ ನಡೆದ ಕಾರ್ಯವಿಧಾನದ ಮತದಾನದಲ್ಲಿ ಏಕೈಕ ಅಭ್ಯರ್ಥಿಯಾಗಿ ಹೊರಹೊಮ್ಮಿರುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕರಾಗಿರುವ ಟೆಡ್ರೋಸ್ ಅಧನಾಮ್ ಗೆಬ್ರಯೇಸಸ್ 2ನೇ ಅವಧಿಗೆ ಹುದ್ದೆಯಲ್ಲಿ ಮುಂದುವರಿಯುವುದು ಖಚಿತವಾಗಿದೆ ಎಂದು ಮೂಲಗಳು ಹೇಳಿವೆ.

ಮೇ ತಿಂಗಳಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರ ಹುದ್ದೆಗೆ ಚುನಾವಣೆ ನಡೆಯಲಿದ್ದು ಗೆಬ್ರಯೇಸಸ್ ಕಣದಲ್ಲಿರುವ ಏಕೈಕ ಅಭ್ಯರ್ಥಿಯಾಗಿದ್ದಾರೆ. ಗುಪ್ತ ಮತದಾನದ ಬಳಿಕ ಹುದ್ದೆಗೆ ಏಕೈಕ ಅಭ್ಯರ್ಥಿಯಾಗಿ ಗೆಬ್ರಯೇಸಸ್ ಹೆಸರನ್ನು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿ ಅನುಮೋದಿಸಿದೆ. ತನಗೆ ನೀಡಿರುವ ಬೆಂಬಲವನ್ನು ನವೀಕರಿಸಿದ್ದಕ್ಕಾಗಿ ಕೃತಜ್ಞನಾಗಿರುತ್ತೇನೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರ ಹುದ್ದೆಗೇರಿದ ಪ್ರಥಮ ಆಫ್ರಿಕನ್ ಮುಖಂಡ ಗೆಬ್ರಯೇಸಸ್ ಪ್ರತಿಕ್ರಿಯಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ 34 ಸದಸ್ಯ ದೇಶಗಳಲ್ಲಿ 31 ದೇಶಗಳ ಪ್ರತಿನಿಧಿಗಳು ಗೆಬ್ರಯೇಸಸ್ ಪರ ಮತ ಚಲಾಯಿಸಿದರು. ತೋಂಗ, ಅಫ್ಘಾನಿಸ್ತಾನ ಮತ್ತು ಈಸ್ಟ್ ಟಿಮೋರ್ ದೇಶಗಳ ಪ್ರತಿನಿಧಿಗಳು ಸಭೆಗೆ ಗೈರುಹಾಜರಾಗಿದ್ದರು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೂಲಗಳು ಹೇಳಿವೆ. ಮೇ ತಿಂಗಳಿನಲ್ಲಿ ನಡೆಯುವ ಚುನಾವಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ 194 ಸದಸ್ಯ ದೇಶಗಳು ಮತ ಚಲಾಯಿಸಲಿವೆ. ಮೊದಲ ಅವಧಿಯಲ್ಲಿ ಕೋವಿಡ್ ಸೋಂಕಿನ ವಿರುದ್ಧದ ಹೋರಾಟ ಅತ್ಯಂತ ಸವಾಲಿನದ್ದಾಗಿತ್ತು ಮತ್ತು ಈ ಹೋರಾಟವನ್ನು ಮುಂದುವರಿಸಲು ಅವಕಾಶ ದೊರಕಿರುವುದು ದೊಡ್ಡ ಗೌರವವಾಗಿದೆ ಎಂದು ಇಥಿಯೋಪಿಯಾದ ಮಾಜಿ ಸಚಿವರಾದ ಗೆಬ್ರಯೇಸಸ್ ಹೇಳಿದ್ದಾರೆ. 

ಕೋವಿಡ್ ಸೋಂಕಿನ ಬಿಕ್ಕಟ್ಟಿನ ನಿರ್ವಹಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತೋರಿದ ಕಾರ್ಯ ಸರ್ವತ್ರ ಶ್ಲಾಘನೆಗೆ ಒಳಗಾಗಿದೆ. ಆದರೆ, ವಿಪರ್ಯಾಸವೆಂದರೆ ಗೆಬ್ರಯೇಸಸ್ 2ನೇ ಅವಧಿಯಲ್ಲಿ ಮುಂದುವರಿಯುವುದಕ್ಕೆ ಅವರ ದೇಶದಿಂದಲೇ ವಿರೋಧ ಎದುರಾಗಿತ್ತು. ಇಥಿಯೋಪಿಯಾದ ಟಿಗ್ರೆ ವಲಯದಲ್ಲಿ ಇರುವ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿ ಕುರಿತು ಗೆಬ್ರಯೇಸಸ್ ನೀಡಿದ್ದ ಹೇಳಿಕೆ ಆ ದೇಶದ ಸರಕಾರದ ಕಣ್ಣು ಕೆಂಪಗಾಗಿಸಿತ್ತು. ದುರ್ನಡತೆ ಮತ್ತು ವೃತ್ತಿಪರ ಮತ್ತು ಕಾನೂನಾತ್ಮಕ ಜವಾಬ್ದಾರಿಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ವಿಚಾರಣೆಗೆ ಒಳಪಡಿಸಿ ಕ್ರಮ ಕೈಗೊಳ್ಳಬೇಕು ಎಂದು ಇಥಿಯೋಪಿಯಾ ಸರಕಾರ ಆಗ್ರಹಿಸಿತ್ತು. ಆದರೆ ಇದಕ್ಕೆ ಇತರ ಸದಸ್ಯರ ಸಹಮತ ಇರಲಿಲ್ಲ. ಅಮೆರಿಕ ಮತ್ತು ಚೀನಾ ದೇಶಗಳೂ ಗೆಬ್ರಯೇಸಸ್‌ಗೆ ಬೆಂಬಲ ಸೂಚಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News