2 ಹಂತಗಳಲ್ಲಿ ರಣಜಿ ಟ್ರೋಫಿ ಆಯೋಜನೆ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

Update: 2022-01-28 18:03 GMT
ಜಯ್ ಶಾ(file photo:PTI)

ಮುಂಬೈ, ಜ.28: ಸುಮಾರು ಎರಡು ವರ್ಷಗಳ ಹಿಂದೆ ಸೌರಾಷ್ಟ್ರ ತಂಡ ಬಂಗಾಳವನ್ನು ಫೈನಲ್ ಪಂದ್ಯದಲ್ಲಿ 44 ರನ್‌ಗಳಿಂದ ಸೋಲಿಸಿ ರಾಜ್ ಕೋಟ್‌ನಲ್ಲಿ ರಣಜಿ ಟ್ರೋಫಿ ಜಯಿಸಿತ್ತು. ಸಾಂಪ್ರದಾಯಿಕ ದೇಶೀಯ ಕ್ರಿಕೆಟ್ ಟೂರ್ನಮೆಂಟ್ ಮತ್ತೆ ಮರಳಲು ಸಿದ್ಧವಾಗಿದೆ.

ಕ್ರಿಕೆಟ್ ಮಂಡಳಿಯು 2021-22ರ ಆವೃತ್ತಿಯ ರಣಜಿ ಟ್ರೋಫಿಯನ್ನು ಎರಡು ಹಂತದಲ್ಲಿ ಆಯೋಜಿಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಶಾ ಶುಕ್ರವಾರ ಘೋಷಣೆ ಮಾಡುವ ಮೂಲಕ ದೇಶಾದ್ಯಂತದ ನೂರಾರು ದೇಶೀಯ ಕ್ರಿಕೆಟ್ ಅಂಪೈರ್‌ಗಳು, ಸ್ಕೋರರ್‌ಗಳು ಹಾಗೂ ಮೈದಾನದ ಸಹಾಯಕ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಈ ಮೊದಲು ಬಿಸಿಸಿಐ ರಣಜಿ ಟ್ರೋಫಿಯನ್ನು ಮುಂದೂಡಲು ನಿರ್ಧರಿಸಿತ್ತು. ಇದೀಗ ಐಪಿಎಲ್‌ಗಿಂತ ಮೊದಲು ಲೀಗ್ ಹಂತ ಹಾಗೂ ಟ್ವೆಂಟಿ-20 ಲೀಗ್‌ನ ಬಳಿಕ ನಾಕೌಟ್ ಹಂತವನ್ನು ನಡೆಸಲು ನಿರ್ಧರಿಸಲಾಗಿದೆ.

‘‘ಕ್ರಿಕೆಟ್ ಮಂಡಳಿಯು ಈ ವರ್ಷದ ರಣಜಿ ಟ್ರೋಫಿ ಋತುವನ್ನು ಎರಡು ಹಂತಗಳಲ್ಲಿ ನಡೆಸಲು ನಿರ್ಧರಿಸಿದೆ. ಮೊದಲ ಹಂತದಲ್ಲಿ ನಾವು ಎಲ್ಲ ಲೀಗ್ ಹಂತದ ಪಂದ್ಯಗಳನ್ನು ಪೂರ್ಣಗೊಳಿಸಲು ಯೋಜಿಸಿದ್ದೇವೆ. ಜೂನ್‌ನಲ್ಲಿ ನಾಕೌಟ್ ಹಂತದ ಪಂದ್ಯಗಳು ನಡೆಯುತ್ತವೆ. ಅತ್ಯಂತ ಸ್ಪರ್ಧಾತ್ಮಕ ಕೆಂಪು ಚೆಂಡಿನ ಕ್ರಿಕೆಟ್ ಸ್ಪರ್ಧೆಯಲ್ಲಿ ಸಾಂಕ್ರಾಮಿಕದಿಂದ ಯಾವುದೇ ರೀತಿಯ ಆರೋಗ್ಯ ಅಪಾಯವಾಗದಂತೆ ನಮ್ಮ ತಂಡ ನಿರಂತರವಾಗಿ ಕಾರ್ಯನಿರ್ವಹಿಸಲಿದೆ. ರಣಜಿ ಟ್ರೋಫಿಯು ನಮ್ಮ ಅತ್ಯಂತ ಪ್ರತಿಷ್ಠಿತ ದೇಶಿಯ ಪಂದ್ಯಾವಳಿಯಾಗಿದೆ. ಇದು ಪ್ರತಿ ವರ್ಷ ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಪ್ರತಿಭೆಗಳನ್ನು ಒದಗಿಸುತ್ತಿದೆ. ಈ ಪ್ರಮುಖ ಟೂರ್ನಿಯ ಹಿತಾಸಕ್ತಿಯನ್ನು ಕಾಪಾಡಲು ಎಲ್ಲ ಅಗತ್ಯವಿರುವ ಹೆಜ್ಜೆಗಳನ್ನು ನಾವು ಇಡುತ್ತೇವೆ’’ ಎಂದು ಶಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ರಣಜಿ ಟ್ರೋಫಿ ಯು ಭಾರತೀಯ ಕ್ರಿಕೆಟ್‌ನಬೆನ್ನೆಲುಬು. ಪ್ರಮುಖ ದೇಶೀಯ ರೆಡ್‌ಬಾಲ್ ಟೂರ್ನಿಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸ ಬಾರದು. ಈ ಟೂರ್ನಿಯನ್ನು ನಿರ್ಲಕ್ಷಿಸುವ ಕ್ಷಣದಿಂದಲೇ ನಮ್ಮ ಕ್ರಿಕೆಟ್ ಮೊಣಚು ಕಳೆದುಕೊಳ್ಳಲಿದೆ ಎಂದು ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಶುಕ್ರವಾರ ಟ್ವೀಟಿಸಿದ್ದರು.

ದೇಶದಲ್ಲಿ ಕೋವಿಡ್-19 ಪ್ರಕರಣಗಳು ಉಲ್ಬಣಗೊಂಡ ಕಾರಣ ಬಿಸಿಸಿಐ ಜನವರಿ 4ರಂದು ರಣಜಿ ಟ್ರೋಫಿಯನ್ನು ಮುಂದೂಡಿತ್ತು. ರಣಜಿ ಟ್ರೋಫಿ ಹಾಗೂ ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿಯು ಈ ವರ್ಷದ ಜನವರಿಯಲ್ಲಿ ಆರಂಭವಾಗಬೇಕಾಗಿತ್ತು. ಕೋವಿಡ್-19ನಿಂದಾಗಿ ಕಳೆದ ವರ್ಷವೂ ರಣಜಿ ಟ್ರೋಫಿ ರದ್ದುಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News