ಸ್ವದೇಶದಲ್ಲಿ 44 ವರ್ಷಗಳ ಬಳಿಕ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ ಮೊದಲ ಆಸ್ಟ್ರೇಲಿಯ ಆಟಗಾರ್ತಿ ಅಶ್ ಬಾರ್ಟಿ

Update: 2022-01-29 12:45 GMT
ಅಶ್ ಬಾರ್ಟಿ (photo:twitter/@AustralianOpen)

ಮೆಲ್ಬೋರ್ನ್, ಜ.29: ನಿರ್ಭೀತಿಯಿಂದ ಆಡಿದ ಅಮೆರಿಕದ ಡೇನಿಯಲ್ ಕಾಲಿನ್ಸ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಅಶ್ ಬಾರ್ಟಿ ಸ್ವದೇಶದಲ್ಲಿ 44 ವರ್ಷಗಳ ಬಳಿಕ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಆಸ್ಟ್ರೇಲಿಯದ ಮೊದಲ ಆಟಗಾರ್ತಿ ಎಂಬ ಹಿರಿಮೆಯೊಂದಿಗೆ ಐತಿಹಾಸಿಕ ಸಾಧನೆ ಮಾಡಿದರು.

ಶನಿವಾರ ವಿಶ್ವದ ನಂ.1 ಆಟಗಾರ್ತಿ ಬಾರ್ಟಿ 27ನೇ ಶ್ರೇಯಾಂಕಿತೆ ಕಾಲಿನ್ಸ್‌ರನ್ನು 6-3, 7-6(7/2)ಸೆಟ್‌ಗಳ ಅಂತರದಿಂದ ಸೋಲಿಸಿದರು. ಈ ಮೂಲಕ ರಾಡ್ ಲಾವೆರ್ ಅರೆನಾದಲ್ಲಿ ತವರು ಪ್ರೇಕ್ಷಕರ ಸಮ್ಮುಖದಲ್ಲಿ ಆಸ್ಟ್ರೇಲಿಯನ್ ಓಪನ್ ಕಿರೀಟ ಧರಿಸಿದರು. 25ರ ಹರೆಯದ ಬಾರ್ಟಿ ಪಾಲಿಗೆ ಇದು ಮೂರನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯಾಗಿದೆ. 2019ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದ ಬಾರ್ಟಿ ಕಳೆದ ವರ್ಷ ವಿಂಬಲ್ಡನ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿದ್ದರು. ಎಲ್ಲ ಮೂರು ಪ್ರಕಾರದ ಅಂಗಣದಲ್ಲಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಸಕ್ರಿಯ ಆಟಗಾರ್ತಿ ಎನಿಸಿಕೊಳ್ಳುವುದರೊಂದಿಗೆ ಸೆರೆನಾ ವಿಲಿಯಮ್ಸ್ ಸಾಧನೆ ಸರಿಗಟ್ಟಿದರು.

 ‘‘ಇಂದು ನನ್ನ ಕನಸು ನನಸಾಗಿದೆ. ನಾನು ಆಸ್ಟ್ರೇಲಿಯ ಆಟಗಾರ್ತಿಯಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ. ನೀವು ನನ್ನನ್ನು ನಿರಾಳಗೊಳಿಸಿದ್ದೀರಿ. ಡೇನಿಯಲ್ ಅವರಂತಹ ಚಾಂಪಿಯನ್ ವಿರುದ್ಧ ನನ್ನ ಅತ್ಯುತ್ತಮ ಟೆನಿಸ್ ಆಡಲು ಒತ್ತಾಯಿಸಿದ್ದೀರಿ. ಡೇನಿಯಲ್‌ಗೆ ಅಭಿನಂದನೆಗಳು’’ ಎಂದು ಬಾರ್ಟಿ ಹೇಳಿದ್ದಾರೆ.

ಮೆಲ್ಬೋರ್ನ್ ಪಾರ್ಕ್‌ನಲ್ಲಿ ಕೊನೆಯ ಬಾರಿ 1978ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದ ಆಸ್ಟ್ರೇಲಿಯದ ಆಟಗಾರ್ತಿ ಕ್ರಿಸ್ಟಿನ್ ಒ’ನೀಲ್ ಸ್ಟೇಡಿಯಂನಲ್ಲಿ ಹಾಜರಿದ್ದು, ಪಂದ್ಯವನ್ನು ವೀಕ್ಷಿಸಿದರು. ಬಾರ್ಟಿ ಅವರು ಕ್ರಿಸ್ಟಿನ್ ಸಮ್ಮುಖದಲ್ಲಿ ಐತಿಹಾಸಿಕ ಸಾಧನೆ ಮಾಡಿದರು.

‘‘ನಾನು ಆಕೆಯ(ಬಾರ್ಟಿ)ಅತಿ ದೊಡ್ಡ ಅಭಿಮಾನಿಯಾಗಿದ್ದೇನೆ. ಈ ಪ್ರಶಸ್ತಿಯನ್ನು ಆಕೆಗೆ ಹಸ್ತಾಂತರಿಸಲು ತುಂಬಾ ಸಂತೋಷ ಪಡುತ್ತೇನೆ. ಏಕೆಂದರೆ ಆಕೆ ಇದಕ್ಕೆ ಅರ್ಹರಿದ್ದಾಳೆ’’ ಎಂದು ಪಂದ್ಯ ಆರಂಭವಾಗುವ ಮೊದಲೇ ಕ್ರಿಸ್ಟಿನ್ ಒ’ನೀಲ್ ಹೇಳಿದ್ದಾರೆ.

2021ರಲ್ಲಿ ಸತತ ಮೂರನೇ ವರ್ಷ ವಿಶ್ವದ ನಂ.1 ಆಟಗಾರ್ತಿಯಾಗಿ ಹೊರಹೊಮ್ಮಿದ್ದ ಬಾರ್ಟಿ ಇದೀಗ ವರ್ಷದ ಮೊದಲ ಗ್ರಾನ್‌ಸ್ಲಾಮ್ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸುವ ಮೂಲಕ ಹೊಸ ವರ್ಷವನ್ನು ಆರಂಭಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News