ಅಫ್ಗಾನಿಸ್ತಾನದಲ್ಲಿ ಅಭದ್ರತೆಯ ಮತ್ತು ಅನಿಶ್ಚಿತತೆಯ ಸ್ಥಿತಿಯಿದೆ: ವಿಶ್ವಸಂಸ್ಥೆ ವರದಿ

Update: 2022-02-04 17:33 GMT

ವಿಶ್ವಸಂಸ್ಥೆ, ಫೆ.4: ಸಂಘರ್ಷದಿಂದ ಜರ್ಝರಿತಗೊಂಡಿರುವ ಅಫ್ಗಾನಿಸ್ತಾನದಲ್ಲಿ ಬಹು ರಾಜಕೀಯ, ಸಾಮಾಜಿಕ-ಆರ್ಥಿಕ ಮತ್ತು ಮಾನವೀಯ ಆಘಾತಗಳು ಎಲ್ಲೆಡೆ ಪ್ರತಿಧ್ವನಿಸುತ್ತಿದ್ದು ಈಗ ಆ ದೇಶದಲ್ಲಿ ಅತ್ಯಂತ ಅಭದ್ರತೆಯ ಮತ್ತು ಅನಿಶ್ಚಿತತೆಯ ಪರಿಸ್ಥಿತಿ ನೆಲೆಸಿದೆ ಎಂದು ವಿಶ್ವಸಂಸ್ಥೆಯ ಪ್ರಧಾ ಕಾರ್ಯದರ್ಶಿ ವರದಿ ಮಾಡಿದ್ದಾರೆ. ‌

ತಾಲಿಬಾನ್ ಈ ಹಿಂದೆ ಅಧಿಕಾರದಲ್ಲಿದ್ದಾಗ ಅದನ್ನು ಅಂತರಾಷ್ಟ್ರೀಯ ಸಮುದಾಯ ಪ್ರತ್ಯೇಕವಾಗಿರಿಸಿತ್ತು. ಈಗ ಈ ರೀತಿ ಮಾಡದೆ ಇರುವುದು ಆ ದೇಶದ ಸ್ಥಿರತೆಯ ನಿಟ್ಟಿನಲ್ಲಿ ಅತ್ಯುತ್ತಮ ಉಪಕ್ರಮವಾಗಿದೆ ಎಂದು ‘ಅಫ್ಗಾನಿಸ್ತಾನದ ಪರಿಸ್ಥಿತಿ ಮತ್ತು ಅಂತರಾಷ್ಟ್ರೀಯ ಶಾಂತಿ ಮತ್ತು ಸ್ಥಿರತೆಯ ಮೇಲೆ ಅದರ ಪರಿಣಾಮ’ ಎಂಬ ಶೀರ್ಷಿಕೆಯ ವರದಿಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ತದರ್ಶಿ ಅಂಟೆನಿಯೊ ಗುಟೆರಸ್ ಉಲ್ಲೇಖಿಸಿದ್ದಾರೆ.
   
ಉಸ್ತುವಾರಿ ಸರಕಾರದ ರೀತಿಯಲ್ಲಿ ತನ್ನನ್ನು ಪ್ರಸ್ತುತಪಡಿಸಲು ತಾಲಿಬಾನ್ ಪ್ರಯತ್ನಿಸುತ್ತಿದೆ. ಆದರೆ ದೇಶದ ಜನಾಂಗೀಯ, ರಾಜಕೀಯ, ಭೌಗೋಳಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ, ಮಹಿಳೆಯರನ್ನೂ ಒಳಗೊಂಡಿರುವ ಸರಕಾರ ಇನ್ನೂ ರಚನೆಯಾಗಿಲ್ಲ. ಆರ್ಥಿಕ ಸಂಪನ್ಮೂಲ ಮತ್ತು ಸಾಮರ್ಥ್ಯದ ಕೊರತೆ, ಅಂತರಾಷ್ಟ್ರೀಯ ನಿಯಮದ ಆಡಳಿತಕ್ಕೆ ವಿರುದ್ಧವಾದ ಸಿದ್ಧಾಂತಗಳು ಇದಕ್ಕೆ ಅಡ್ಡಿಯಾಗಿವೆ. ತಾಲಿಬಾನ್ ಆಂತರಿಕ ಹೊಂದಾಣಿಕೆಯ ಸಮಸ್ಯೆ ಎದುರಿಸುತ್ತಿದೆ. ಆಡಳಿತ ನಡೆಸುವ ತನ್ನ ಸಾಮರ್ಥ್ಯದ ಬಗ್ಗೆ ದೇಶದ ಜನರ ವಿಶ್ವಾಸ ಗಳಿಸುವಲ್ಲಿ ಅವರು ವಿಫಲವಾಗಿರುವುದರಿಂದ ಹಲವಾರು ಮಂದಿ ದೇಶ ಬಿಟ್ಟು ತೆರಳಲು ಬಯಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಫ್ಗಾನ್ನ ವೈವಿಧ್ಯಮಯ ಸಮಾಜದ ಆಶಯ ಮತ್ತು ಆಸಕ್ತಿಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರತಿಫಲಿಸುವ, ಎಲ್ಲರನ್ನೂ ಒಳಗೊಂಡ ಸರಕಾರ ರಚನೆಯ ಪ್ರಕ್ರಿಯೆಗೆ ನೆರವಾಗುವ ರೀತಿಯ ಎಲ್ಲಾ ಪ್ರಯತ್ನಗಳನ್ನು ನಡೆಸುವುದು ಈಗಿನ ಅಗತ್ಯವಾಗಿದೆ ಎಂದವರು ವರದಿಯಲ್ಲಿ ಹೇಳಿದ್ದಾರೆ.
     
ಅಫ್ಗಾನಿಸ್ತಾನವು ವ್ಯಾಪಕ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಆಡಳಿತ ವ್ಯವಸ್ಥೆಯಲ್ಲಿನ ಕೊರತೆ ಮತ್ತು ನೆರವು ಪೂರೈಕೆಯ ಸ್ಥಗಿತ, ನಿರ್ಬಂಧದಿಂದಾಗಿ ಸಂಕೀರ್ಣ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ. ತಾಲಿಬಾನ್ನನ್ನು ಪ್ರತ್ಯೇಕವಾಗಿರಿಸದೆ, ಸಂಬಂಧ ಪಟ್ಟ ಪಕ್ಷಗಳು ಹಾಗೂ ಅಂತರಾಷ್ಟ್ರೀಯ ಸಮುದಾಯದ ಮಧ್ಯೆ ರಚನಾತ್ಮಕ ಮಾತುಕತೆಗೆ ಪ್ರೋತ್ಸಾಹ ನೀಡುವುದು ಈ ದೇಶದ ಸ್ಥಿರತೆಯನ್ನು ಉತ್ತೇಜಿಸುವ ಅತ್ಯುತ್ತಮ ಮಾರ್ಗವಾಗಿದೆ . ಈ ನಿಟ್ಟಿನಲ್ಲಿ ಕೈಗೊಂಡಿರುವ ಕೆಲವು ಧನಾತ್ಮಕ ಉಪಕ್ರಮಗಳನ್ನು ಗಮನಿಸಲಾಗಿದೆ. ಅಫ್ಗಾನ್ನ ಕುರಿತು ನಡೆಯುವ ಮಾತುಕತೆಯು ಅಂತರಾಷ್ಟ್ರೀಯ ಸಮುದಾಯದೊಂದಿಗೆ ಅಫ್ಗಾನ್ನ ಭವಿಷ್ಯದ ಸಂಬಂಧ, ದೇಶದ ಜನತೆಯ ಸಮೃದ್ಧಿ ಮತ್ತು ಭದ್ರತೆಯ ಮೇಲೆ ಗಮನಾರ್ಹ ಪರಿಣಾಮ ಬೀರುವ ಮೂಲಭೂತ ಮಾನವ ಹಕ್ಕುಗಳು ಹಾಗೂ ಸ್ವಾತಂತ್ರ್ಯದ ಸಹಿತ ವ್ಯಾಪಕ ವಿಷಯಗಳನ್ನು ಒಳಗೊಂಡಿರಬೇಕು ಎಂದು ಗುಟೆರಸ್ ಅಭಿಪ್ರಾಯ ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News