ಮಕಾವೊದಲ್ಲಿ ಕಾನೂನು ಬಿಗಿಗೊಳಿಸಿದ ಚೀನಾ

Update: 2022-02-07 18:29 GMT

  ಬೀಜಿಂಗ್, ಫೆ.7: ಹಾಂಕಾಂಗ್ನಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ತನ್ನ ಸಾರ್ವಭೌಮತ್ವಕ್ಕೆ ಒಳಪಟ್ಟ ಅರೆಸ್ವಾಯತ್ತ ಪ್ರದೇಶ ಮಕಾವೊದಲ್ಲಿ ಬೇರುಬಿಡದಂತೆ ಎಚ್ಚರ ವಹಿಸಿರುವ ಚೀನಾ, ಮಕಾವೊದ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಕಾವೊದಲ್ಲಿ ಯೋಜಿತ ಚುನಾವಣೆ ನಡೆಸುವುದು ಹಾಗೂ ರಾಷ್ಟ್ರೀಯ ಭದ್ರತಾ ಕ್ರಮಗಳನ್ನು ಇನ್ನಷ್ಟು ಕಠಿಣಗೊಳಿಸುವುದು ಈ ಯೋಜನೆಯಲ್ಲಿ ಸೇರಿದೆ. ವಿಶೇಷ ಆಡಳಿತ ವಲಯ ಎಂದು ಚೀನಾ ಗೊತ್ತುಪಡಿಸಿರುವ ಮಕಾವೊದಲ್ಲಿ ಶಾಸಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ವಿಧಾನಗಳನ್ನು ನಿಯಂತ್ರಿಸುವ ವ್ಯವಸ್ಥೆ ರೂಪಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ಆಡಳಿತವನ್ನು ಸುಧಾರಿಸಲು ತ್ವರಿತ ಪ್ರಯತ್ನ ನಡೆಸಲಾಗುವುದು ಮತ್ತು ರಾಷ್ಟ್ರೀಯ ಭದ್ರತೆಯ ನಿಯಮ ಮತ್ತು ಅವುಗಳ ಅನುಷ್ಟಾನಕ್ಕೆ ಸಂಬಂಧಿಸಿದ ಕಾನೂನು ನಿಬಂಧನೆಗಳನ್ನು ಸುಧಾರಣೆಗೊಳಿಸಲಾಗುವುದು ಎಂದು ಮಕಾವೊ ಸರಕಾರ ಹೇಳಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯ ಸಂಪೂರ್ಣ ಅನುಷ್ಟಾನ, ಭಯೋತ್ಪಾದನೆ ಹಾಗೂ ಸಂವಹನ ಪ್ರತಿಬಂಧಕ ಕಾನೂನುಗಳ ಸಮರ್ಪಕ ಜಾರಿಗೆ ಕ್ರಮ ಮತ್ತು ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಮಕಾವೊದ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಚುನಾವಣೆಯ ವ್ಯವಸ್ಥೆಯಲ್ಲಿ ಸುಧಾರಣೆಯು ಈ ಪ್ರದೇಶದ ಆಡಳಿವು ದೇಶಭಕ್ತರ ಕೈಯಲ್ಲಿ ಸುರಕ್ಷಿತವಾಗಿ ಇರುವುದನ್ನು ಖಾತರಿಪಡಿಸಲಿದೆ ಎಂದು ಸರಕಾರದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News