ಶಾಲೆಯ 8 ಲಕ್ಷ ಡಾಲರ್ ಹಣವನ್ನು ಜೂಜಾಡಲು ಕದ್ದ ಕ್ರೈಸ್ತ ಸನ್ಯಾಸಿನಿಗೆ ಜೈಲುಶಿಕ್ಷೆ‌

Update: 2022-02-08 18:38 GMT

ಲಾಸ್ಏಂಜಲೀಸ್, ಫೆ.8: ಶಾಲಾ ನಿಧಿಯ ಹಣವನ್ನು ಕದ್ದು ಜೂಜಾಟಕ್ಕೆ ಮತ್ತು ಅದ್ದೂರಿ ರಜಾದಿನಕ್ಕೆ ವ್ಯಯಿಸಿದ ಅಪರಾಧದಲ್ಲಿ ರೋಮನ್ ಕ್ಯಾಥೊಲಿಕ್ ಪ್ರಾಥಮಿಕ ಶಾಲೆಯ ಪ್ರಾಂಶುಪಾಲೆ, 80 ವರ್ಷದ ಕ್ರೈಸ್ತ ಸನ್ಯಾಸಿನಿ ಮೇರಿ ಮಾರ್ಗರೆಟ್ ಕ್ರೂಪರ್ಗೆ 1 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ಶಾಲಾ ಮಕ್ಕಳ ಟ್ಯೂಷನ್ ಫೀಸ್ ಗೆ ಹಾಗೂ ಇತರ ಅಗತ್ಯಗಳಿಗೆ ದೇಣಿಗೆಯಾಗಿ ಬಂದಿದ್ದ 8,35,000 ಡಾಲರ್ ಮೊತ್ತವನ್ನು ಕ್ರೂಪರ್ ತನ್ನ ವೈಯಕ್ತಿಕ ಖಾತೆಗೆ ವರ್ಗಾಯಿಸಿದ್ದರು. ಈ ಅಕ್ರಮ ಆಂತರಿಕ ಲೆಕ್ಕಪತ್ರ ಪರಿಶೋಧನೆಯ ಸಂದರ್ಭ ಬೆಳಕಿಗೆ ಬಂದಾಗ, ಈ ದಾಖಲೆಯನ್ನು ನಾಶಪಡಿಸಲು ಪ್ರಯತ್ನಿಸಿದ್ದರು. 

ಬಳಿಕ ಕ್ರೈಸ್ತ ಧರ್ಮಪ್ರಾಂತ್ಯ ನಡೆಸಿದ ವಿಚಾರಣೆ ಸಂದರ್ಭ, ಪಾದ್ರಿಗಳಿಗೆ ಸನ್ಯಾಸಿನಿಯರಿಗಿಂತ ಹೆಚ್ಚಿನ ವೇತನ ದೊರಕುತ್ತಿರುವುದರಿಂದ ಈ ರೀತಿ ಮಾಡುವುದು ಸರಿ ಎಂದು ಭಾವಿಸಿದ್ದೆ ಎಂದಿದ್ದರು. ಈ ಹಣವನ್ನು ರಜಾ ದಿನಗಳಲ್ಲಿ ಅದ್ದೂರಿ ರೆಸಾರ್ಟ್, ಹಿಲ್ ಸ್ಟೇಷನ್ ಗಳಲ್ಲಿ ತಂಗುವ ಮೂಲಕ ಹಾಗೂ ಜೂಜಾಡಲು ವ್ಯಯಿಸಿದ್ದರು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ಆರೋಪಿಸಲಾಗಿತ್ತು. ತಾನು ತಪ್ಪು ಮಾಡಿರುವುದಾಗಿ ಕ್ರೂಪರ್ ಒಪ್ಪಿಕೊಂಡಿದ್ದಾರೆ. 2018ರಲ್ಲಿ ವಿಚಾರಣೆ ಆರಂಭವಾದಂದಿನಿಂದ ಅವರನ್ನು ಇರಿಸಿರುವ ಕಾನ್ವೆಂಟ್ ನಲ್ಲಿ ಅವರು ಜೈಲುಶಿಕ್ಷೆ ಅನುಭವಿಸಲು ಅವಕಾಶ ಮಾಡಿಕೊಡುವಂತೆ ಕೂಪರ್ ಅವರ ವಕೀಲರು ನ್ಯಾಯಾಲಯವನ್ನು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News