×
Ad

ರಶ್ಯಾ ಆಕ್ರಮಣದ ಭೀತಿ: ಉಕ್ರೇನ್ ತೊರೆಯುವಂತೆ ವಿದೇಶಗಳ ಸೂಚನೆ

Update: 2022-02-14 22:07 IST
Source : PTI

ಪ್ಯಾರಿಸ್, ಫೆ.14: ಉಕ್ರೇನ್ ಮೇಲೆ ರಶ್ಯಾದ ಆಕ್ರಮಣದ ಭೀತಿ ಹೆಚ್ಚುತ್ತಿರುವಂತೆಯೇ, ಅಲ್ಲಿಂದ ಸಾಧ್ಯವಾದಷ್ಟು ಬೇಗ ಹೊರಡುವಂತೆ ಆ ದೇಶದಲ್ಲಿರುವ ತಮ್ಮ ಪ್ರಜೆಗಳಿಗೆ ಹಲವು ದೇಶಗಳು ಸಲಹೆ ನೀಡಿವೆ. ಜತೆಗೆ, ಉಕ್ರೇನ್ನಲ್ಲಿರುವ ತಮ್ಮ ರಾಜತಾಂತ್ರಿಕರ ಪ್ರಮಾಣವನ್ನೂ ಕಡಿತಗೊಳಿಸಿದೆ. ಉಕ್ರೇನ್ನಿಂದ ತೆರಳುವಂತೆ ತಮ್ಮ ಪ್ರಜೆಗಳಿಗೆ ಕರೆ ನೀಡಿದ ದೇಶಗಳಲ್ಲಿ ಅಮೆರಿಕ, ಜರ್ಮನಿ, ಇಟಲಿ, ಬ್ರಿಟನ್, ಐರ್ಲ್ಯಾಂಡ್, ಬೆಲ್ಜಿಯಂ, ಲುಕ್ಸೆಂಬರ್ಗ್, ನೆದರ್ಲ್ಯಾಂಡ್, ಕೆನಡಾ, ನಾರ್ವೆ, ಎಸ್ಟೋನಿಯಾ, ಲಿಥುವೇನಿಯಾ, ಬಲ್ಗೇರಿಯಾ, ಸ್ಲೊವೇನಿಯಾ, ಆಸ್ಟ್ರೇಲಿಯಾ, ಜಪಾನ್, ಇಸ್ರೇಲ್, ಸೌದಿ ಅರೆಬಿಯಾ ಮತ್ತು ಯುಎಇ ಸೇರಿದೆ.

‌ಪೂರ್ವ ಉಕ್ರೇನ್ ಗಡಿಭಾಗಕ್ಕೆ ತೆರಳದಂತೆ ತನ್ನ ಪ್ರಜೆಗಳಿಗೆ ಫ್ರಾನ್ಸ್ ಸೂಚಿಸಿದೆ. ಆದರೆ ಉಕ್ರೇನ್ನಿಂದ ಹೊರಡುವಂತೆ ಸೂಚನೆ ನೀಡಿಲ್ಲ. ಉಕ್ರೇನ್ನೊಂದಿಗೆ ಗಡಿ ಹಂಚಿಕೊಂಡಿರುವ ರೊಮಾನಿಯಾ , ಉಕ್ರೇನ್ಗೆ ಪ್ರವಾಸ ತೆರಳದಂತೆ ತನ್ನ ಪ್ರಜೆಗಳಿಗೆ ಸೂಚಿಸಿದ್ದು, ಒಂದು ವೇಳೆ ಈಗಾಗಲೇ ಅಲ್ಲಿದ್ದರೆ, ಅಲ್ಲಿ ಉಳಿದುಕೊಳ್ಳುವ ಅಗತ್ಯದ ಬಗ್ಗೆ ಮರುಪರಿಶೀಲಿಸುವಂತೆ ಸಲಹೆ ನೀಡಿದೆ.
   
ಉಕ್ರೇನ್ನಲ್ಲಿನ ಪರಿಸ್ಥಿತಿಯನ್ನು ಗಮನಿಸಿ, ಅಲ್ಲಿ ನಡೆಯಬಹುದಾದ ಸಂಭವನೀಯ ಪ್ರಚೋದನಕಾರಿ ಕ್ರಮಗಳ ಸಾಧ್ಯತೆಯ ಹಿನ್ನೆಲೆಯಲ್ಲಿ ತನ್ನ ರಾಜತಾಂತ್ರಿಕ ಸಿಬಂದಿಗಳಲ್ಲಿ ಕೆಲವರನ್ನು ವಾಪಾಸು ಕರೆಸಿಕೊಳ್ಳುವುದಾಗಿ ರಶ್ಯಾ ಹೇಳಿದೆ. ಉಕ್ರೇನ್ನಲ್ಲಿದ್ದ ಸೇನಾ ಸಲಹೆಗಾರರನ್ನು ಅಮೆರಿಕ ಮತ್ತು ಬ್ರಿಟನ್ ವಾಪಾಸು ಕರೆಸಿಕೊಂಡಿದೆ. ಉಕ್ರೇನ್ ಬಿಟ್ಟುತೆರಳುವಂತೆ ಬಹುತೇಕ ರಾಜತಾಂತ್ರಿಕ ಸಿಬಂದಿಗಳಿಗೆ ಅಮೆರಿಕ ಸೂಚಿಸಿದ್ದು ಉಕ್ರೇನ್ ಪಶ್ಚಿಮದ ನಗರ ಲಿವಿವ್ನಲ್ಲಿನ ಕಾನ್ಸುಲರ್ ಕಚೇರಿ ಕಾರ್ಯನಿರ್ವಹಿಸಲಿದೆ ಎಂದಿದೆ. 

ಆಸ್ಟ್ರೇಲಿಯಾವೂ ಇದೇ ಕ್ರಮ ಕೈಗೊಂಡಿದೆ. ಉಕ್ರೇನ್ನಲ್ಲಿನ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಿದ್ದು, ಲಿವಿವ್ ಗೆ ಸ್ಥಳಾಂತರಿಸಿರುವುದಾಗಿ ಕೆನಡಾ ಘೋಷಿಸಿದೆ. ಮುಂದಿನ ಸೂಚನೆಯವರೆಗೆ, ಉಕ್ರೇನ್ ಗೆ ತೆರಳುವ ಎಲ್ಲಾ ವಿಮಾನಗಳ ಸಂಚಾರವನ್ನು ರದ್ದುಗೊಳಿಸುವುದಾಗಿ ಹಾಲಂಡಿನ ವಿಮಾನಯಾನ ಸಂಸ್ಥೆ ಕೆಎಲ್ಎಮ್ ಘೋಷಿಸಿದೆ. ಉಕ್ರೇನ್ನಲ್ಲಿನ ಅಗತ್ಯವಿಲ್ಲದ ರಾಜತಾಂತ್ರಿಕ ಸಿಬಂದಿಗಳು ತಕ್ಷಣ ಹೊರಡಬೇಕೆಂದು ಯುರೋಪಿಯನ್ ಯೂನಿಯನ್ ಸೂಚಿಸಿದೆ.ರೆ, ರಶ್ಯಾದ ಆಕ್ರಮಣದ ಸಂಭವನೀಯತೆಯ ನಡುವೆಯೂ, ತನ್ನ ವಾಯುಯಾನ ಕ್ಷೇತ್ರವನ್ನು ಸಂಚಾರಕ್ಕೆ ಮುಕ್ತಗೊಳಿಸಿರುವುದಾಗಿ ಉಕ್ರೇನ್ ಸರಕಾರ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News