ಅಫ್ಗಾನ್ ಗೆ ಸೇರಿದ ಹಣವನ್ನು ಹಂಚುವ ನಿರ್ಧಾರ ಬದಲಿಸಿ: ಅಮೆರಿಕಕ್ಕೆ ತಾಲಿಬಾನ್ ಎಚ್ಚರಿಕೆ

Update: 2022-02-15 18:13 GMT
ಸಾಂದರ್ಭಿಕ ಚಿತ್ರ

ಕಾಬೂಲ್, ಫೆ.15: ವಿದೇಶಿ ಬ್ಯಾಂಕ್ಗಳಲ್ಲಿ ಜಮೆಯಾಗಿರುವ ಅಫ್ಗಾನ್ನ ವಿದೇಶಿ ವಿನಿಮಯ ಮೊತ್ತದ ಒಂದು ಅಂಶವನ್ನು 9/11 ಭಯೋತ್ಪಾದಕ ದಾಳಿಯ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ರೂಪದಲ್ಲಿ ವಿತರಿಸುವ ನಿರ್ಧಾರ ಬದಲಿಸದಿದ್ದರೆ ಅಮೆರಿಕದ ವಿರುದ್ಧದ ತನ್ನ ಕಾರ್ಯನೀತಿಯನ್ನು ಮರುಪರಿಶೀಲಿಸಬೇಕಾಗುತ್ತದೆ ಎಂದು ತಾಲಿಬಾನ್ ಎಚ್ಚರಿಸಿದೆ.
 
ಅಫ್ಗಾನಿಸ್ತಾನದ ಈ ಹಿಂದಿನ ಸರಕಾರ ವಿದೇಶದ ಬ್ಯಾಂಕ್ ನಲ್ಲಿ ಇರಿಸಿದ್ದ 7 ಬಿಲಿಯನ್ ಮೊತ್ತದ ಹಣವನ್ನು ಅಮೆರಿಕ ಸ್ಥಂಭನಗೊಳಿಸಿತ್ತು. ಈ ಹಣದ ಒಂದು ಭಾಗವನ್ನು 2001ರ ಸೆಪ್ಟಂಬರ್ 11ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಸಂತ್ರಸ್ತ ಕುಟುಂಬದವರಿಗೆ ಒದಗಿಸುವುದಾಗಿ ಕಳೆದ ವಾರ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದರು.

ಅಫ್ಗಾನ್ ಗೆ ಸೇರಿದ ಹಣವನ್ನು ಸ್ಥಂಭನಗೊಳಿಸಿರುವುದು ಕಳ್ಳತನದ ಕೃತ್ಯವಾಗಿದೆ ಮತ್ತು ಇದನ್ನು ಬೇರೆ ಉದ್ದೇಶಕ್ಕೆ ಬಳಸುವುದು ಅಮೆರಿಕದ ನೈತಿಕ ಅಧಃಪತನದ ಸಂಕೇತವಾಗಿದೆ. 9/11 ದಾಳಿ ಪ್ರಕರಣಕ್ಕೂ ಅಫ್ಗಾನಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಅಫ್ಗಾನ್ ಜನತೆಯ ಹಣವನ್ನು ಈ ಘಟನೆಯ ನೆಪದಲ್ಲಿ ದುರ್ಬಳಕೆ ಮಾಡುವುದು ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಗಾನಿಸ್ತಾನದೊಂದಿಗೆ ಮಾಡಿಕೊಂಡ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ . ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಅಮೆರಿಕದ ವಿರುದ್ಧದ ಕಾರ್ಯನೀತಿಯನ್ನು ಮರುಪರಿಶೀಲಿಸಬೇಕಾಗುತ್ತದೆ ಎಂದು ತಾಲಿಬಾನ್ನ ಉಪ ವಕ್ತಾರ ಇನಾಮುಲ್ಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News