ಉಕ್ರೇನ್ ಸಂಘರ್ಷ ಶಮನಕ್ಕೆ ರಷ್ಯಾ, ಫ್ರಾನ್ಸ್ ಒಪ್ಪಿಗೆ

Update: 2022-02-21 02:15 GMT
ಸಾಂದರ್ಭಿಕ ಚಿತ್ರ (PTI)

ಪ್ಯಾರೀಸ್: ರಷ್ಯಾ- ಉಕ್ರೇನ್ ಗಡಿಯಲ್ಲಿ ಯುದ್ಧ ಪರಿಸ್ಥಿತಿಯನ್ನು ತಪ್ಪಿಸಲು ರವಿವಾರ ಗಂಭೀರ ರಾಜತಾಂತ್ರಿಕ ಪ್ರಯತ್ನಗಳು ಆರಂಭವಾಗಿವೆ. ಆದರೆ ಮಾಸ್ಕೊ ಬೆಂಬಲಿತ ಪ್ರತ್ಯೇಕತಾವಾದಿಗಳು ಗಡಿಯ ಮುಂಚೂಣಿಯಲ್ಲಿ ಶೆಲ್ಲಿಂಗ್ ದಾಳಿ ನಡೆಸುವ ಮೂಲಕ ಪರಿಸ್ಥಿತಿ ಉಲ್ಬಣಿಸಿರುವ ವಿಚಾರದಲ್ಲಿ ಉಕ್ರೇನ್ ಹಾಗೂ ರಷ್ಯಾ ಪರಸ್ಪರ ದೋಷಾರೋಪ ಮಾಡಿಕೊಂಡಿವೆ ಎಂದು ವರದಿಯಾಗಿದೆ.

ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ರಷ್ಯಾ ಮುಖಂಡ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್‍ನ ವೊಲೊದಿಮಿರ್ ಝೆಲೆನ್‍ಸ್ಕಿ ಅವರ ಜತೆ ಪ್ರತ್ಯೇಕ ಮಾತುಕತೆ ನಡೆಸಿದ ಬಳಿಕ ಉಭಯ ಮುಖಂಡರು ಇನ್ನಷ್ಟು ಹೆಚ್ಚಿನ ಮಾತುಕತೆ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ನಿಶ್ಚಿತ ಎಂದು ಅಮೆರಿಕ ಎಚ್ಚರಿಕೆ ನೀಡುತ್ತಲೇ ಬಂದಿದೆ. ಆದರೆ "ಉಕ್ರೇನ್‍ನಲ್ಲಿ ಗಂಭೀರ ಸಂಘರ್ಷ ತಪ್ಪಿಸಲು ಕೊನೆಯ ಸಂಭಾವ್ಯ ಮತ್ತು ಅಗತ್ಯ ಪ್ರಯತ್ನ" ಎಂದು ಮ್ಯಾಕ್ರೋನ್ ಅವರ ಕಚೇರಿ ಪ್ರಕಟಿಸಿದೆ.

ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ತುದಿಗಾಗಲಲ್ಲಿ ನಿಂತಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಬ್ಲಿಂಕೆನ್ ಹೇಳಿಕೆ ನೀಡಿದ್ದಾರೆ. ಆದರೆ ಅಧ್ಯಕ್ಷ ಜೋ ಬೈಡನ್ ಅವರು ಪುಟಿನ್ ಜತೆ ಮಾತುಕತೆಗೆ ಸಿದ್ಧ. ರಷ್ಯನ್ ಟ್ಯಾಂಕ್‍ಗಳು ಚಲಿಸುವವರೆಗೂ ಅಮೆರಿಕ ರಾಜತಾಂತ್ರಿಕ ಪರಿಹಾರಕ್ಕೆ ಕೋರಲಿದೆ ಎಂದು ಹೇಳಿದ್ದಾರೆ.

ಮ್ಯಾಕ್ರೋನ್ ಜತೆಗೆ ನಡೆಸಿದ 105 ನಿಮಿಷಗಳ ಮಾತುಕತೆಯಲ್ಲಿ ಪುಟಿನ್, ಉಕ್ರೇನ್ ಭದ್ರತಾ ಪಡೆಗಳು ನಡೆಸುತ್ತಿರುವ ಪ್ರಚೋದನೆ, ಪರಿಸ್ಥಿತಿ ವಿಕೋಪಕ್ಕೆ ಹೋಗಲು ಕಾರಣ ಎಂದು ಹೇಳಿದ್ದಾಗಿ ಕ್ರೆಮ್ಲಿನ್ ಹೇಳಿಕೆ ನೀಡಿದೆ. ರಷ್ಯಾದಲ್ಲಿ ಭದ್ರತಾ ಖಾತರಿಯನ್ನು ನೀಡಬೇಕು ಎಂದು ರಷ್ಯಾ ಬೇಡಿಕೆಯನ್ನು ಅಮೆರಿಕ ಮತ್ತು ನ್ಯಾಟೊ ಪರಿಗಣಿಸಬೇಕು ಎಂದು ಪುಟಿನ್ ಪುನರುಚ್ಚರಿಸಿದರು. ಆದರೆ ರಾಜತಾಂತ್ರಿಕ ವಿಧಾನದ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಗಳನ್ನು ತೀವ್ರಗೊಳಿಸುವುದು ಅಗತ್ಯ ಎಂದು ಉಭಯ ಮುಖಂಡರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News