ಶ್ರೀಲಂಕಾ ವಿರುದ್ಧ ಟ್ವೆಂಟಿ-20 ಸರಣಿಯಿಂದ ಸೂರ್ಯಕುಮಾರ್ ಯಾದವ್ ಔಟ್
ಮುಂಬೈ: ಸದ್ಯ ಟೀಮ್ ಇಂಡಿಯಾ ಪಾಳಯದಲ್ಲಿ ಒಂದೊಂದೆ ಆಟಗಾರರು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಮಂಡಿರಜ್ಜು ಗಾಯದಿಂದಾಗಿ ವೇಗದ ಬೌಲರ್ ದೀಪಕ್ ಚಹಾರ್ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಿಂದ ಹೊರಗುಳಿದ ನಂತರ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಕೂಡ ಗುರುವಾರದಿಂದ ಲಕ್ನೊದಿಂದ ಆರಂಭವಾಗುವ ಸರಣಿಗೆ ಲಭ್ಯವಿರುವುದಿಲ್ಲ ಎಂದು ತಿಳಿದುಬಂದಿದೆ. ಯಾದವ್ ಕೈಗೆ ಗಾಯವಾಗಿದೆ.
ಈ ಹಂತದಲ್ಲಿ ಬಯೋ-ಬಬಲ್ ಪ್ರೋಟೋಕಾಲ್ ಜಾರಿಯಲ್ಲಿರುವ ಕಾರಣ ಚಹಾರ್ ಮತ್ತು ಯಾದವ್ ಇಬ್ಬರಿಗೂ ಬದಲಿ ಆಟಗಾರರನ್ನು ಬಿಸಿಸಿಐ ಘೋಷಿಸುವ ಸಾಧ್ಯತೆಯಿಲ್ಲ.
ತಂಡದ ಗಾತ್ರವನ್ನು ಈಗ 16 ಕ್ಕೆ ಇಳಿಸಲಾಗಿದೆ. ಫೆಬ್ರವರಿ 26 ಮತ್ತು 27 ರಂದು ಧರ್ಮಶಾಲಾದಲ್ಲಿ ಕೊನೆಯ ಎರಡು ಟಿ-20 ಪಂದ್ಯಗಳು ನಡೆಯಲಿವೆ. 31 ವರ್ಷದ ಯಾದವ್ ರವಿವಾರ ಈಡನ್‌ನಲ್ಲಿ ನಡೆದ ಮೂರನೇ ಟ್ವೆಂಟಿ-20ಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 31 ಎಸೆತಗಳಲ್ಲಿ 65 ರನ್ ಸಿಡಿಸಿದ್ದರು.
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಮಂಡಿರಜ್ಜು ಗಾಯಕ್ಕೆ ಒಳಗಾದ ಚಹಾರ್ ಈಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ತೆರಳಲಿದ್ದಾರೆ.
"ರವಿವಾರ ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಫೀಲ್ಡಿಂಗ್ ಪ್ರಯತ್ನದ ವೇಳೆ ಸೂರ್ಯಕುಮಾರ್ ಅವರ ಕೈ ಮುರಿತಕ್ಕೆ ಒಳಗಾಗಿದ್ದರೆ ದೀಪಕ್ ಬೌಲಿಂಗ್ ಸಮಯದಲ್ಲಿ ಗಾಯಗೊಂಡಿದ್ದಾರೆ" ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.