ಶ್ರೀಲಂಕಾ ವಿರುದ್ಧ ಮೊದಲ ಟ್ವೆಂಟಿ-20: ಭಾರತ 2 ವಿಕೆಟ್ ನಷ್ಟಕ್ಕೆ 199 ರನ್

Update: 2022-02-24 15:46 GMT
ಇಶಾನ್ ಕಿಶನ್, Photo: BCCI

ಲಕ್ನೊ, ಫೆ.24: ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ನೀಡಿದ ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತ ತಂಡ ಗುರುವಾರ ನಡೆದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ 2 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿದೆ.
  
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತಕ್ಕೆ ನಾಯಕ ರೋಹಿತ್ ಶರ್ಮಾ(44 ರನ್, 32 ಎಸೆತ, 2 ಬೌಂಡರಿ, 1 ಸಿಕ್ಸರ್)ಹಾಗೂ ಇಶಾನ್ ಕಿಶನ್(89 ರನ್, 56 ಎಸೆತ, 10 ಬೌಂಡರಿ, 3 ಸಿಕ್ಸರ್)ಮೊದಲ ವಿಕೆಟ್‌ಗೆ 111 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು.

ರೋಹಿತ್ ಔಟಾದ ಬಳಿಕ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ 2ನೇ ವಿಕೆಟ್ ಜೊತೆಯಾಟದಲ್ಲಿ 44 ರನ್ ಸೇರಿಸಿದರು. 30 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 2ನೇ ಟ್ವೆಂಟಿ-20 ಅರ್ಧಶತಕ ಸಿಡಿಸಿದ ಇಶಾನ್ ಲಂಕಾ ನಾಯಕ ಶನಕಾರಿಗೆ ವಿಕೆಟ್ ಒಪ್ಪಿಸಿದರು.

ದುಷ್ಮಂತ ಚಾಮೀರಾ ಅವರ ಕೊನೆಯ ಓವರ್‌ನಲ್ಲಿ ತಲಾ 1 ಸಿಕ್ಸರ್, ಬೌಂಡರಿ ಸಹಿತ ಒಟ್ಟು 16 ರನ್ ಗಳಿಸಿದ ಶ್ರೇಯಸ್ ಅಯ್ಯರ್(ಔಟಾಗದೆ 57 ರನ್,28 ಎಸೆತ, 5 ಬೌಂ., 2 ಸಿ.)ಕೇವಲ 25 ಎಸೆತಗಳಲ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 4ನೇ ಅರ್ಧಶತಕ ಪೂರೈಸಿದರು. ಜೊತೆಗೆ ತಂಡದ ಮೊತ್ತವನ್ನು 199ಕ್ಕೆ ತಲುಪಿಸಿದರು.

ಭಾರತವು ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಅಂತಿಮ-11ರ ಬಳಗದಲ್ಲಿ ಸುಮಾರು 6 ಬದಲಾವಣೆ ಮಾಡಿದ್ದು, ದೀಪಕ್ ಹೂಡ ಮೊದಲ ಬಾರಿ ಟ್ವೆಂಟಿ-20 ಆಡುವ ಅವಕಾಶ ಪಡೆದಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News