ಭೀಕರ ಕಾಳಗ: ಉಕ್ರೇನ್ ರಾಜಧಾನಿಯನ್ನು ಪ್ರವೇಶಿಸಿದ ರಷ್ಯಾದ ಪಡೆಗಳು‌

Update: 2022-02-25 18:38 GMT
ಉಕ್ರೇನ್

ಹೊಸದಿಲ್ಲಿ,ಫೆ.25: ಉಕ್ರೇನ್ ರಾಜಧಾನಿ ಕೀವ್ ದಾಳಿಗೆ ಅಥವಾ ಮುತ್ತಿಗೆಗೆ ಒಳಗಾಗಲಿದೆ ಎಂಬ ಹೆಚ್ಚುತ್ತಿರುವ ಭೀತಿಗಳ ನಡುವೆಯೇ ರಷ್ಯದ ಆಕ್ರಮಣಕಾರಿ ಸೇನೆಯ ಮುಂಚೂಣಿ ಪಡೆಯೊಂದು ಶುಕ್ರವಾರ ನಗರವನ್ನು ಪ್ರವೇಶಿಸಿದ್ದು, ಮೊದಲ ಬಾರಿಗೆ ಘರ್ಷಣೆಗಳು ಭುಗಿಲೆದ್ದಿವೆ. ನಗರದಲ್ಲಿ ಉಂಟಾಗಿರುವ ಹಾನಿಯು ರಷ್ಯನ್ ಪಡೆಯ ದಾಳಿಯ ಭೀಕರತೆಯನ್ನು ತೋರಿಸುತ್ತಿದೆ.

ಕೀವ್ ನ ಉತ್ತರದಲ್ಲಿರುವ ಒಬೊಲನ್ಸ್ಕಿ ಜಿಲ್ಲೆಯಲ್ಲಿ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಾಟ ಮತ್ತು ಸ್ಫೋಟಗಳಿಂದ ಭಯಭೀತ ಪಾದಚಾರಿಗಳು ಸುರಕ್ಷಿತ ಸ್ಥಳಗಳಿಗೆ ಧಾವಿಸುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ನಗರದ ಕೇಂದ್ರಭಾಗದಲ್ಲಿ ದೊಡ್ಡ ಸ್ಫೋಟಗಳ ಶಬ್ದಗಳು ಕೇಳಿಬರುತ್ತಿದ್ದವು. ಅಲ್ಲಿಯ ನಿವಾಸಿಗಳು ಮೊದಲ ಬಾರಿಗೆ ಕರ್ಫ್ಯೂ ಮತ್ತು ಬಾಂಬ್ ಸ್ಫೋಟಗಳ ಸದ್ದುಗಳ ನಡುವೆ ತಮ್ಮ ಮೊದಲ ರಾತ್ರಿಯನ್ನು ಕಳೆದಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. 

‘ವೈರಿ ವಿಧ್ವಂಸಕ ಮತ್ತು ವಿಚಕ್ಷಣ ’ ಗುಂಪು ಘರ್ಷಣೆಗಳನ್ನು ಪ್ರಚೋದಿಸಿತ್ತು ಎಂದು ಉಕ್ರೇನ್ ರಕ್ಷಣಾ ಸಚಿವಾಲಯವು ಹೇಳಿದೆ. ಗುರುವಾರ ಹೆಲಿಕಾಪ್ಟರ್ನಲ್ಲಿದ್ದ ಸೈನಿಕರು ಒಬೊಲನ್ಸ್ಕಿಗೆ ಸಮೀಪದ ಗೊಸ್ಟೊಮೆಲ್ ವಾಯುನೆಲೆಯ ಮೇಲೆ ದಾಳಿ ನಡೆಸಿದಾಗ ರಷ್ಯನ್ ಪಡೆಗಳು ಮೊದಲ ಬಾರಿಗೆ ಕೀವ್ ನಗರದ ಹೊರವಲಯವನ್ನು ತಲುಪಿದ್ದವು. 

ಉತ್ತರ ಕೀವ್ನ ಅಗಲವಾದ ಹೆದ್ದಾರಿಗಳಲ್ಲಿ ಮತ್ತು ದಟ್ಟವಾದ ಜನವಸತಿಯ ಬಹುಮಹಡಿ ಅಪಾರ್ಟ್ಮೆಂಟ್ ಕಟ್ಟಡಗಳ ನಡುವೆ ನಡೆಯುತ್ತಿರುವ ಕಾಳಗವು ಸುಮಾರು 30 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ರಾಜಧಾನಿಯ ಮೇಲೆ ರಷ್ಯ ಪಡೆಗಳು ದಾಳಿ ನಡೆಸಿದರೆ ಏನು ಕಾದಿದೆ ಎನ್ನುವುದನ್ನು ಸೂಚಿಸಬಹುದು.

ದ್ವಿತೀಯ ಮಹಾಯುದ್ಧದ ಬಳಿಕ ಐರೋಪ್ಯ ದೇಶವೊಂದರ ಮೇಲಿನ ಬೃಹತ್ ದಾಳಿಯಲ್ಲಿ ತನ್ನ ಯೋಧರು ರಷ್ಯದ ಆಕ್ರಮಣಕಾರರ ವಿರುದ್ಧ ಹೋರಾಡುತ್ತಿರುವಾಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಕೀವ್ನಲ್ಲಿಯೇ ಉಳಿಯುವುದಾಗಿ ಶಪಥವನ್ನು ತೊಟ್ಟಿದ್ದಾರೆ. ‘ವೈರಿದೇಶವು ನನ್ನನ್ನು ನಂ.ಗುರಿಯನ್ನಾಗಿ ಗುರುತಿಸಿದೆ’ ಎಂದು ವೀಡಿಯೊ ಸಂದೇಶದಲ್ಲಿ ಎಚ್ಚರಿಕೆಯನ್ನು ನೀಡಿರುವ ಅವರು,‘ನನ್ನ ಕುಟುಂಬವು ನಂ.2 ಗುರಿಯಾಗಿದೆ. ನಾನು ರಾಜಧಾನಿಯಲ್ಲಿಯೇ ಇರುತ್ತೇನೆ. ನನ್ನ ಕುಟುಂಬವು ಸಹ ಉಕ್ರೇನ್ನಲ್ಲಿದೆ ’ಎಂದು ಹೇಳಿದ್ದಾರೆ. 

ತನ್ನ ದೇಶವು ಉಕ್ರೇನ್ ಅನ್ನು ದಬ್ಬಾಳಿಕೆಯಿಂದ ಮುಕ್ತಗೊಳಿಸಲು ಬಯಸಿದೆ ಎಂದು ಶುಕ್ರವಾರ ಮಾಸ್ಕೋದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ ರಷ್ಯದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೋವ್ ಅವರು,ಉಕ್ರೇನ್ ಅನ್ನು ನಿಸ್ಸೇನಿಕರಿಸಲು ಮತ್ತು ನಾಝಿಮುಕ್ತಗೊಳಿಸಲು ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಲು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಿರ್ಧರಿಸಿದ್ದಾರೆ ಎಂದು ತಿಳಿಸಿದರು. ಕಳೆದ ಎಂಟು ವರ್ಷಗಳಿಂದಲೂ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಮಾಸ್ಕೋಗೆ ಸಂಯೋಜಿತ ಕ್ರಿಮಿಯಾಕ್ಕೆ ನೀರು ಪೂರೈಸಲು ಪ್ರಮುಖ ಕಾಲುವೆಯೊಂದನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ರಷ್ಯದ ಪಡೆಗಳು ತಿಳಿಸಿವೆ. ಕ್ರಿಮಿಯಾ 2014ರವರೆಗೂ ತನ್ನ ಹೆಚ್ಚಿನ ನೀರನ್ನು ಉತ್ತರ ಕ್ರಿಮಿಯನ್ ಕಾಲುವೆಯ ಮೂಲಕ ಉಕ್ರೇನ್ ನ ನೀಪರ್ ನದಿಯಿಂದ ಪಡೆದುಕೊಳ್ಳುತ್ತಿತ್ತು. 2014ರಲ್ಲಿ ಕ್ರಿಮಿಯಾ ರಷ್ಯದೊಂದಿಗೆ ಸಂಯೋಜಿತಗೊಂಡ ಬಳಿಕ ಉಕ್ರೇನ್ ಅಧಿಕಾರಿಗಳು ಕಾಲುವೆಗೆ ತಡೆಯೊಡ್ಡಿದ್ದರು.

ಉಕ್ರೇನ್ ಮೇಲಿನ ಆಕ್ರಮಣವು ರಷ್ಯದ ವಿರುದ್ಧ ಗಂಭೀರ ಆರ್ಥಿಕ ನಿರ್ಬಂಧಗಳನ್ನು ಆಹ್ವಾನಿಸಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರು ಶ್ವೇತಭವನದಿಂದ ಮಾಡಿದ ಭಾಷಣದಲ್ಲಿ,ಎರಡು ಅತ್ಯಂತ ದೊಡ್ಡ ಬ್ಯಾಂಕುಗಳಾದ ಸ್ಪೆರ್ಬ್ಯಾಂಕ್ ಮತ್ತು ವಿಟಿಬಿ ಸೇರಿದಂತೆ ಇನ್ನೂ ನಾಲ್ಕು ಬ್ಯಾಂಕುಗಳು ಪಾಶ್ಚಾತ್ಯ ದೇಶಗಳ ನಿರ್ಬಂಧಗಳಿಗೆ ಗುರಿಯಾಗಲಿವೆ. ಇದರ ಜೊತೆಗೆ ಸೂಕ್ಷ್ಮ ಬಿಡಿಭಾಗಗಳ ಮೇಲೆ ಹೇರಲಾಗಿರುವ ರಫ್ತು ನಿಯಂತ್ರಣಗಳು ರಷ್ಯದ ಅರ್ಧಕ್ಕೂ ಹೆಚ್ಚಿನ ಹೈಟೆಕ್ ಆಮದುಗಳನ್ನು ಕಡಿತಗೊಳಿಸುತ್ತದೆ. ದಂಡನೆಗಳು ತೀವ್ರವಾಗಿರುತ್ತವೆ ಮತ್ತು ರಷ್ಯದ ಆರ್ಥಿಕತೆಯ ಮೇಲೆ ಶಾಶ್ವತ ಪರಿಣಾಮವನ್ನುಂಟು ಮಾಡಲಿವೆ ಎಂದು ಹೇಳಿದ್ದಾರೆ.

ಪುಟಿನ್ ಅವರ ಮೇಲೆ ನೇರವಾಗಿ ನಿರ್ಬಂಧಗಳನ್ನು ಹೇರಲು ಸದ್ಯಕ್ಕೆ ಪ್ರಯತ್ನಿಸುವುದಿಲ್ಲ ಎಂದು ಬೈಡೆನ್ ದೃಢಪಡಿಸಿದರು. ಪುಟಿನ್ ತನ್ನ ಎರಡು ದಶಕಗಳ ಅಧಿಕಾರಾವಧಿಯಲ್ಲಿ ಬೃಹತ್,ರಹಸ್ಯ ಸಂಪತ್ತನ್ನು ಗಳಿಸಿದ್ದಾರೆ ಎನ್ನಲಾಗಿದೆ.

ಉಕ್ರೇನ್ ಬಿಕ್ಕಟ್ಟು ಕುರಿತು ಅಮೆರಿಕವು ಭಾರತದೊಂದಿಗೆ ಸಮಾಲೋಚನೆಗಳನ್ನು ನಡೆಸಲಿದೆ ಎಂದೂ ಬೈಡೆನ್ ತಿಳಿಸಿದರು. ಭಾರತವು ರಷ್ಯದೊಂದಿಗೆ ಐತಿಹಾಸಿಕ ಮತ್ತು ಸದೃಢ ಸ್ನೇಹವನ್ನು ಹೊಂದಿದೆ. ಇದೇ ವೇಳೆ ಕಳೆದ ಒಂದೂವರೆ ದಶಕಗಳಲ್ಲಿ ಅಮೆರಿಕದೊಂದಿಗೆ ಅದರ ವ್ಯೆಹಾತ್ಮಕ ಪಾಲುದಾರಿಕೆಯು ಅಭೂತಪೂರ್ವ ವೇಗದಲ್ಲಿ ಬೆಳವಣಿಗೆಯಾಗಿದೆ.
 
ಗುರುವಾರ ತಡರಾತ್ರಿ ಪುಟಿನ್ ಅವರೊಂದಿಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ‘ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ’ಅವರನ್ನು ಮನವಿ ಮಾಡಿಕೊಂಡಿದ್ದಾರೆ. ಭಾರತದ ತುರ್ತು ಹಸ್ತಕ್ಷೇಪವನ್ನು ಉಕ್ರೇನ್ ಕೋರಿಕೊಂಡ ಬಳಿಕ ಈ ಮಾತುಕತೆ ನಡೆದಿದೆ.

ಕೀವ್ ನ ಬೀದಿಗಳಲ್ಲಿ ಭೀಕರ ಕಾಳಗ

ಶುಕ್ರವಾರ ಉತ್ತರ ಕೀವ್ನ ವಸತಿ ಪ್ರದೇಶದಲ್ಲಿ ರಸ್ತೆಯ ಬದಿಯಲ್ಲಿ ನಾಗರಿಕನ ಶವವೊಂದು ಬಿದ್ದುಕೊಂಡಿದ್ದರೆ,ಎರಡಂತಸ್ತಿನ ಕಟ್ಟಡವೊಂದನ್ನು ಗುರಾಣಿಯನ್ನಾಗಿಸಿಕೊಂಡು ಉಕ್ರೇನ್ ಸೈನಿಕರು ಸನ್ನದ್ಧ ಸ್ಥಿತಿಯಲ್ಲಿದ್ದರು.

ಎರಡು ಡಝನ್ ಮೀ.ಗಳಷ್ಟು ದೂರದಲ್ಲಿ ಶಸ್ತ್ರಸಜ್ಜಿತ ವಾಹನದ ಕೆಳಗೆ ಸಿಲುಕಿ ಅಪ್ಪಚ್ಚಿಯಾಗಿದ್ದ ಕಾರಿನಲ್ಲಿದ್ದ ಗಾಯಾಳು ಚಾಲಕನಿಗೆ ನೆರವಾಗಲು ವೈದ್ಯಕೀಯ ಸಿಬ್ಬಂದಿಗಳು ಧಾವಿಸುತ್ತಿದ್ದರು.

ರಷ್ಯದ ಆಕ್ರಮಣಕಾರಿ ಸೇನೆಯ ಮುಂಚೂಣಿ ಪಡೆಯು ಶುಕ್ರವಾರ ಮೊದಲ ಬಾರಿಗೆ ಕೀವ್ ನಗರವನ್ನು ಪ್ರವೇಶಿಸಿದ್ದು,ತನ್ನ ಮಾರ್ಗದುದ್ದಕ್ಕೂ ದಾಳಿಯ ವಿನಾಶಕ ಕುರುಹುಗಳನ್ನು ಬಿಟ್ಟಿದೆ.

ಟ್ರಕ್ಕೊಂದರ ಸಮೀಪ ರಷ್ಯದ ಸೈನಿಕರಂತೆ ಕಾಣುತ್ತಿದ್ದ ಎರಡು ಶವಗಳನ್ನು ತಾವು ನೋಡಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದರು,ಆದರೆ ನಜ್ಜುಗುಜ್ಜಾಗಿದ್ದ ಕಾರನ್ನು ಪರಿಶೀಲಿಸುತ್ತಿದ್ದ ಉಕ್ರೇನ್ ಸೈನಿಕರು ವರದಿಗಾರರನ್ನು ಹತ್ತಿರಕ್ಕೆ ಬರಲು ಅವಕಾಶ ನೀಡಲಿಲ್ಲ.

‘ಗುಪ್ತ ಗುರುತುಗಳೊಂದಿಗೆ ಪದಾತಿ ದಳದ ಎರಡು ಹೋರಾಟ ವಾಹನಗಳು ರಸ್ತೆಯುದ್ದಕ್ಕೂ ಸಾಗುತ್ತಿದ್ದವು. ಅವುಗಳ ಯೂನಿಟ್ ಚಿಹ್ನೆಯನ್ನು ತಾನು ನೋಡಲಿಲ್ಲ. ಒಂದು ಅಂಡರ್ಪಾಸ್ನಲ್ಲಿ ಬಚ್ಚಿಟ್ಟುಕೊಂಡಿತ್ತು ಮತ್ತು ಇನ್ನೊಂದು ರಸ್ತೆಯಲ್ಲಿ ಮುಂದಕ್ಕೆ ಸಾಗಿತ್ತು. ಆದರೆ ಅದು ಮನೆಯೊಂದರ ಅಂಗಳಕ್ಕೆ ತಿರುಗಿತ್ತು ಮತ್ತು ಮುಂದಕ್ಕೆ ಅದನ್ನು ನಾನು ನೋಡಲಿಲ್ಲ. ಜನರು ದಿಕ್ಕಾಪಾಲಾಗಿ ಓಡುತ್ತಿದ್ದರು ’ಎಂದು ನಾಗರಿಕ ಯೆವ್ಗೆನ್ ನಾಲುಟೆ ತಿಳಿಸಿದರು. ಶುಕ್ರವಾರ ಬೆಳಿಗ್ಗೆ ಗುಂಡು ಹಾರಾಟದ ಶಬ್ದ ಕೇಳಿದ ಬಳಿಕ ತಾನು ತನ್ನ ಬಾಲ್ಕನಿಗೆ ಧಾವಿಸಿದ್ದೆ. ಶಸ್ತ್ರಸಜ್ಜಿತ ವಾಹನವೊಂದು ತನ್ನ ಕಣ್ಣಿಗೆ ಬಿದ್ದಿತ್ತು ಮತ್ತು ಅದು ಸ್ವಯಂಚಾಲಿತವಾಗಿ ಗುಂಡುಗಳನ್ನು ಹಾರಿಸುತ್ತಿತ್ತು.ಈಗ ಬಹುಶಃ ವಿಮಾನ ನಿರೋಧಕ ಗನ್ ಹೊಂದಿರುವ ಈ ಕಾರು ಇಲ್ಲಿದೆ ಎಂದು ಸ್ಥಳೀಯ ನಿವಾಸಿ ವಿಕ್ಟರ್ ಬೆರ್ಬಾಷ್ ತಿಳಿಸಿದರು.

ನಾಗರಿಕನೋರ್ವನ ಕಾರನ್ನು ಟ್ಯಾಂಕ್ ಅಪ್ಪಚ್ಚಿಗೊಳಿಸಿದೆ,ಅದೂ ಉದ್ದೇಶಪೂರ್ವಕವಾಗಿ. ಚಾಲಕ ಬದುಕಿದ್ದಾನೆಯೇ ಅಥವಾ ಸತ್ತಿದ್ದಾನೆಯೇ ಎನ್ನುವುದು ತಮಗೆ ಖಚಿತವಿಲ್ಲ ಎಂದರು.

ಕೀವ್ ನಗರದ ಹೊರವಲಯದಲ್ಲಿರುವ ಗೊಸ್ಟೊಮೆಲ್ ವಾಯುನೆಲೆಯ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಉಕ್ರೇನ್ ಸೇನೆ ಹೇಳಿದೆ,ಆದರೆ ರಷ್ಯದ ಸೈನಿಕರು ಬೆಲಾರುಸ್ನಿಂದ ನೀಪರ್ ನದಿಯ ಪಶ್ಚಿಮ ದಂಡೆಯತ್ತ ಮುನ್ನುಗುತ್ತಿದ್ದಾರೆ.

ರಷ್ಯದ ವಿಚಕ್ಷಣ ಪಡೆಯು ಒಬೊಲನ್ಸ್ಕಿಗೆ ಆಗಮಿಸುತ್ತಿದ್ದಂತೆ ಅದನ್ನು ಪ್ರತಿರೋಧಿಸುವಂತೆ ಮತ್ತು ಅದರ ಚಲನವಲನದ ಬಗ್ಗೆ ಮಾಹಿತಿ ನೀಡುವಂತೆ ನಾಗರಿಕರಿಗೆ ರಕ್ಷಣಾ ಸಚಿವಾಲಯವು ಆನ್ಲೈನ್ನಲ್ಲಿ ಕರೆ ನೀಡಿತ್ತು.

ರಷ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ಸರಕಾರವನ್ನು ಕಿತ್ತೊಗೆಯಲು ಉದ್ದೇಶಿಸಿರುವಂತಿದೆ. ರಷ್ಯದ ಪಡೆಗಳು ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ರಾಜಧಾನಿ ಕೀವ್ ಮೇಲೆ ಮುಗಿಬೀಳಲಿವೆ ಎಂದು ಪಾಶ್ಚಾತ್ಯ ಗುಪ್ತಚರ ಏಜೆನ್ಸಿಗಳು ನಿರೀಕ್ಷಿಸಿವೆ.

ಗುರುವಾರ ರಾತ್ರಿಯಿಡೀ ಕೀವ್ ನಗರದೊಳಗೆ ರಷ್ಯದ ಕ್ಷಿಪಣಿಗಳ ದಾಳಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News