3ನೇ ವಿಶ್ವಯುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡಿರುತ್ತದೆ: ರಶ್ಯಾ

Update: 2022-03-02 17:29 GMT

ಮಾಸ್ಕೊ, ಮಾ.2: ಒಂದು ವೇಳೆ 3ನೇ ವಿಶ್ವಯುದ್ಧ ಸಂಭವಿಸಿದರೆ ಅದು ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಳ್ಳಲಿದೆ ಮತ್ತು ಅತ್ಯಂತ ವಿನಾಶಕಾರಿಯಾಗಲಿದೆ ಎಂದು ರಶ್ಯಾದ ವಿದೇಶ ವ್ಯವಹಾರ ಸಚಿವ ಸೆರ್ಗೈ ಲಾವ್ರೋವ್ ಬುಧವಾರ ಹೇಳಿದ್ದಾರೆ. ಉಕ್ರೇನ್ ಗೆ ಪರಮಾಣು ಶಸ್ತ್ರ ಲಭಿಸಿದರೆ ಕಳೆದ ವಾರ ಉಕ್ರೇನ್ ವಿರುದ್ಧ ರಶ್ಯಾ ಆರಂಭಿಸಿದ ‘ವಿಶೇಷ ಕಾರ್ಯಾಚರಣೆ’ಗೆ ನಿಜವಾದ ಅಪಾಯ ಎದುರಾಗಲಿದೆ ಎಂದವರು ಹೇಳಿದ್ದಾರೆ. ಈ ಮಧ್ಯೆ, ಉಕ್ರೇನ್ನ 2ನೇ ಅತೀ ದೊಡ್ಡ ನಗರ ಖಾರ್ಕಿವ್ ಮೇಲೆ ಬುಧವಾರವೂ ರಶ್ಯಾದ ಆಕ್ರಮಣ ಮುಂದುವರಿದಿದೆ ಎಂದು ಖಾರ್ಕಿವ್ನ ಮೇಯರ್ ಹೇಳಿದ್ದಾರೆ. 

ಜನವಸತಿ ಪ್ರದೇಶಗಳ ಮೇಲೆ ಬಾಂಬ್ ದಾಳಿ ನಡೆದಿದ್ದು ಮತ್ತೆ 4 ನಾಗರಿಕರು ಮೃತಪಟ್ಟು 9 ಮಂದಿ ಗಾಯಗೊಂಡಿರುವುದಾಗಿ ಖಾರ್ಕಿವ್ ನ ತುರ್ತು ಸೇವಾ ಇಲಾಖೆ ಹೇಳಿದೆ. ಖಾರ್ಕಿವ್ನಲ್ಲಿ ಪ್ರಾದೇಶಿಕ ಪೊಲೀಸ್ ಮತ್ತು ಗುಪ್ತಚರ ಪಡೆಗಳ ಕೇಂದ್ರಕಚೇರಿಯನ್ನು ಗುರಿಯಾಗಿಸಿ ರಶ್ಯಾ ನಡೆಸಿರುವ ಬಾಂಬ್ ದಾಳಿಯ ಭೀಕರತೆಯನ್ನು ಬಿಂಬಿಸುವ ವೀಡಿಯೊ ಆನ್ ಲೈನ್ ನಲ್ಲಿ ವೈರಲ್ ಆಗಿದೆ. ಬಾಂಬ್ ದಾಳಿಗೆ ಸಿಲುಕಿದ ಕಟ್ಟಡದ ಛಾವಣಿ ಹಾರಿಹೋಗಿರುವ, ಬಹುಮಹಡಿ ಕಟ್ಟಡವೊಂದು ಕುಸಿದು ನೆಲಸಮವಾಗಿರುವ, ಪ್ರಮುಖ ರಸ್ತೆಯಲ್ಲೆಡೆ ಕಟ್ಟಡಗಳ ಅವಶೇಷ ಹರಡಿರುವುದನ್ನು ಈ ವೀಡಿಯೊ ಪ್ರದರ್ಶಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಂಸ್ಕಿ, ಯಾರೂ ಕ್ಷಮಿಸುವುದಿಲ್ಲ, ಯಾರೂ ಮರೆಯುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಖಾರ್ಕಿವ್ನ ಪ್ರಮುಖ ನೆಲೆಗಳನ್ನು ಗುರಿಯಾಗಿಸಿ ರಶ್ಯಾ ನಡೆಸಿದ ಕ್ಷಿಪಣಿ ದಾಳಿಯ ವೀಡಿಯೊಗಳನ್ನು ಉಕ್ರೇನ್ ಸರಕಾರದ ಕಾರ್ಯತಂತ್ರದ ಸಂವಹನ ಕೇಂದ್ರ ಬಿಡುಗಡೆಗೊಳಿಸಿದೆ. ಈ ಮಧ್ಯೆ, ಉಕ್ರೇನ್ ಅಧ್ಯಕ್ಷ ಝೆಲೆಂಸ್ಕಿಗೆ ಕರೆ ಮಾಡಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್, ರಶ್ಯಾ ಆಕ್ರಮಣದ ಕುರಿತ ಸ್ಥಿತಿಗತಿಗಳ ಮಾಹಿತಿ ಪಡೆದರು. ಸರ್ವಾಧಿಕಾರಿಯಾಗಿರುವ ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಆಕ್ರಮಣಕ್ಕೆ ಮುಂದಿನ ದಿನದಲ್ಲಿ ಭಾರೀ ಬೆಲೆ ತೆರಲಿದ್ದಾರೆ ಎಂದವರು ಎಚ್ಚರಿಸಿದ್ದಾರೆ. ಪುಟಿನ್ ಯುದ್ಧರಂಗದಲ್ಲಿ ಮುನ್ನಡೆ ಸಾಧಿಸಬಹುದು, ಆದರೆ ಇದಕ್ಕೆ ಮುಂದೆ ದೀರ್ಘಾವಧಿಯರೆಗೆ ಭಾರೀ ಬೆಲೆ ತೆರಬೇಕಾಗುತ್ತದೆ . ಮುಂದಿನ ದಿನದಲ್ಲಿ ಎದುರಿಸಬೇಕಾದ ಪರಿಸ್ಥಿತಿಯ ಬಗ್ಗೆ ಅವರಿಗೆ ಯಾವ ಕಲ್ಪನೆಯೂ ಇಲ್ಲ ಎಂದು ಅಮೆರಿಕದ ಸಂಸತ್ತನ್ನು ಉದ್ದೇಶಿಸಿ ಮಾಡಿದ ವಾರ್ಷಿಕ ಭಾಷಣದಲ್ಲಿ ಬೈಡನ್ ಹೇಳಿದರು. ರಶ್ಯಾದ ವಿಮಾನಗಳು ಅಮೆರಿಕದ ವಾಯುಕ್ಷೇತ್ರ ಬಳಸುವುದನ್ನು ನಿಷೇಧಿಸಲಾಗಿದೆ. ಅಮೆರಿಕದಲ್ಲಿ ರಶ್ಯಾದ ಶ್ರೀಮಂತರಿಗೆ ಸೇರಿರುವ ವಿಹಾರ ನೌಕೆ, ಐಷಾರಾಮಿ ಬಂಗಲೆಗಳು ಹಾಗೂ ಖಾಸಗಿ ವಿಮಾನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಅಮೆರಿಕದ ನ್ಯಾಯ ಇಲಾಖೆ ಪರಿಶೀಲಿಸುತ್ತಿದೆ ಎಂದವರು ಹೇಳಿದ್ದಾರೆ. ರಶ್ಯಾದ ಆಕ್ರಮಣಕಾರರಿಗೆ ಉಕ್ರೇನ್ ಪಡೆಯಿಂದ ತೀವ್ರ ಪ್ರತಿರೋಧ ಎದುರಾಗಿದೆ. ಬಾಂಬ್ ಮತ್ತು ವಾಯುದಾಳಿಯಿಂದ ಉಕ್ರೇನ್ ಅನ್ನು ರಶ್ಯಾ ವಶಕ್ಕೆ ಪಡೆಯಲು ಸಾಧ್ಯವಿಲ್ಲ. ಆಕ್ರಮಣದ ಪ್ರಥಮ 6 ದಿನದಲ್ಲಿ ಸುಮಾರು 6000 ರಶ್ಯಾ ಯೋಧರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆಂಸ್ಕಿ ಹೇಳಿದ್ದಾರೆ. 

ಖಾರ್ಕಿವ್ ನಲ್ಲಿ ಇಳಿದ ರಶ್ಯಾದ ಪ್ಯಾರಾಟ್ರೂಪ್ ತುಕಡಿ: ಉಕ್ರೇನ್ ಸೇನೆಯೊಂದಿಗೆ ತೀವ್ರ ಸಂಘರ್ಷ

ಉಕ್ರೇನ್ನ 2ನೇ ಅತೀ ದೊಡ್ಡ ನಗರ ಖಾರ್ಕಿವ್ನತ್ತ ಮುನ್ನುಗ್ಗುವ ಭೂಸೇನೆಯ ಪ್ರಯತ್ನಕ್ಕೆ ಉಕ್ರೇನ್ ಪಡೆಗಳಿಂದ ತೀವ್ರ ಪ್ರತಿರೋಧ ಇದಿರಾಗುತ್ತಿದ್ದಂತೆಯೇ ರಣತಂತ್ರ ಬದಲಿಸಿದ ರಶ್ಯಾ , ತನ್ನ ಪ್ಯಾರಾಟ್ರೂಪ್ ತುಕಡಿಯನ್ನು ಖಾರ್ಕಿವ್ ಪಟ್ಟಣದಲ್ಲಿ ಕೆಳಗಿಳಿಸಿದ್ದು ಇದೀಗ ಉಕ್ರೇನ್ ಪಡೆಯೊಂದಿಗೆ ಸಂಘರ್ಷ ತೀವ್ರಗೊಂಡಿದೆ ಎಂದು ವರದಿಯಾಗಿದೆ.

1.4 ಮಿಲಿಯನ್ ಜನಸಂಖ್ಯೆಯಿರುವ ಖಾರ್ಕಿವ್ ನಲ್ಲಿ ಆಕ್ರಮಣಕಾರರ ಪಡೆ ಪ್ಯಾರಾಶೂಟ್ ಮೂಲಕ ಇಳಿದಿದ್ದು ಅವರನ್ನು ಹಿಮ್ಮೆಟ್ಟಿಸಲು ನಮ್ಮ ಯೋಧರು ತೀವ್ರ ಸಂಘರ್ಷ ನಡೆಸುತ್ತಿದ್ದಾರೆ ಎಂದು ಉಕ್ರೇನ್ ಸರಕಾರ ಹೇಳಿದೆ. ಈ ಮಧ್ಯೆ, ಬುಧವಾರ ಉಕ್ರೇತನ್ನ ದಕ್ಷಿಣದಲ್ಲಿರುವ ಪ್ರಮುಖ ಬಂದರು ನಗರ ಖೆರ್ಸಾನ್ ಮೇಲೆ ತನ್ನ ಪಡೆ ನಿಯಂತ್ರಣ ಸಾಧಿಸಿದೆ. ಖೆರ್ಸಾನ್ ನಗರ ರಶ್ಯಾದ ಕೈವಶವಾಗಿದೆ ಎಂದು ರಶ್ಯಾದ ರಕ್ಷಣಾ ಸಚಿವಾಲಯ ನೀಡಿರುವ ಹೇಳಿಕೆಯನ್ನು ಇಂಟರ್ಫ್ಯಾಕ್ಸ್ ಉಲ್ಲೇಖಿಸಿದೆ. ಖೆರ್ಸಾನ್ ಮೇಲೆ ನಿಯಂತ್ರಣ ಸಾಧಿಸಿರುವುದರಿಂದ ಕೀವ್ನತ್ತ ಮುನ್ನುಗ್ಗಲು ಅನುಕೂಲವಾಗಲಿದೆ ಎಂದು ರಶ್ಯಾ ಹೇಳಿದೆ. ಸುಮಾರು 2,90,000 ಜನಸಂಖ್ಯೆಯಿರುವ ಖೆರ್ಸಾನ್ ನಗರ ರಶ್ಯಾ ಪಡೆಗಳ ಸಂಪೂರ್ಣ ನಿಯಂತ್ರಣದಲ್ಲಿದ್ದು ನಗರದಲ್ಲಿ ವಾಹನ ಸೇವೆ ಹಾಗೂ ಇತರ ವ್ಯವಸ್ಥೆಗಳು ಸಹಜ ಸ್ಥಿತಿಯಲ್ಲಿವೆ . ನಗರದಲ್ಲಿ ಆಹಾರ ಮತ್ತು ಅಗತ್ಯ ವಸ್ತುಗಳ ಕೊರತೆಯಿಲ್ಲ.

ನಗರದಲ್ಲಿ ಕಾನೂನು ಸುವ್ಯವಸ್ಥೆ ಮುಂದುವರಿಸುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಮತ್ತು ರಶ್ಯ ಸೇನೆಯ ಮಧ್ಯೆ ಮಾತುಕತೆ ಮುಂದುವರಿದಿದೆ ಎಂದು ರಶ್ಯಾ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಇಗೋರ್ ಕೊನಾಶೆಂಕೊವ್ ಹೇಳಿದ್ದಾರೆ. ಇದಕ್ಕೆ ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಕ್ರಿಯಿಸಿರುವ ಖೆರ್ಸಾನ್ ಮೇಯರ್ ಇಗೋರ್ ಕೊಲಿಖಯೆವ್, ನಾವೀಗಲೂ ಉಕ್ರೇನೀಯರಾಗಿದ್ದೇವೆ ಮತ್ತು ದೃಢವಾಗಿದ್ದೇವೆ. ರಶ್ಯಾದ ಪಡೆಗಳ ದಾಳಿಯಿಂದ ಮೃತಪಟ್ಟಿರುವ ನಾಗರಿಕರ ಮೃತದೇಹಗಳನ್ನು ವಶಕ್ಕೆ ಪಡೆಯುವ, ನಗರದಲ್ಲಿ ವಿದ್ಯುತ್, ನೀರು, ಗ್ಯಾಸ್ ಇತ್ಯಾದಿ ವ್ಯವಸ್ಥೆಗಳನ್ನು ಮರುಸ್ಥಾಪಿಸುವುದಕ್ಕೆ ಈಗ ತುರ್ತು ಗಮನ ನೀಡಬೇಕಾಗಿದೆ ಎಂದು ಹೇಳಿದ್ದಾರೆ. ಮಂಗಳವಾರ ರಶ್ಯಾ ಖಾರ್ಕಿವ್ನ ಮೇಲೆ ನಡೆಸಿದ ಕ್ಷಿಪಣಿ ದಾಳಿ ಜನವಸತಿ ಕಟ್ಟಡಕ್ಕೆ ಮತ್ತು ಸರಕಾರಿ ಕಟ್ಟಡಕ್ಕೆ ಅಪ್ಪಳಿಸಿದ್ದು 18 ನಾಗರಿಕರು ಮೃತಪಟ್ಟಿದ್ದಾರೆ. ಇದೊಂದು ಯುದ್ಧಾಪರಾಧವಾಗಿದೆ ಎಂದು ಉಕ್ರೇನ್ ಅಧ್ಯಕ್ಷರು ಖಂಡಿಸಿದ್ದಾರೆ. 

ಉಕ್ರೇನ್ ಅಸ್ಮಿತೆಗೆ ರಶ್ಯಾದಿಂದ ಬೆದರಿಕೆ: ಝೆಲೆಂಸ್ಕಿ

ರಶ್ಯಾ ಪಡೆ ಮಂಗಳವಾರ ಉಕ್ರೇನ್ ರಾಜಧಾನಿ ಕೀವ್ನಲ್ಲಿ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಟೆಲಿವಿಷನ್ ಟವರ್ ಧ್ವಂಸವಾಗಿದ್ದು, ಇದು ಉಕ್ರೇನ್ನ ಅಸ್ಮಿತೆಗೆ ರಶ್ಯಾದಿಂದ ಎದುರಾದ ಬೆದರಿಕೆಯ ಸಂಕೇತವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಂಸ್ಕಿ ಹೇಳಿದ್ದಾರೆ. ಬಾಬ್ರಿ ಯಾರ್ ಪ್ರದೇಶದ ಬಳಿ ಇರುವ ಟೆಲಿವಿಷನ್ ಗೋಪುರದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ 5 ಮಂದಿ ಮೃತಪಟ್ಟಿದ್ದರು. ನಾಝಿಗಳು ನಡೆಸಿದ್ದ ಸಾಮೂಹಿಕ ನರಮೇಧ(ಮೃತರಲ್ಲಿ ಹೆಚ್ಚಿನವರು ಯೆಹೂದಿಗಳು)ದ ಸ್ಮಾರಕಾರ್ಥ ಈ ಗೋಪುರ ನಿರ್ಮಿಸಲಾಗಿತ್ತು.

ನಮ್ಮ ರಾಜಧಾನಿಯ ಬಗ್ಗೆ, ದೇಶದ ಇತಿಹಾಸದ ಬಗ್ಗೆ ಅವರಿಗೇನೂ ತಿಳಿದಿಲ್ಲ. ಆದರೆ ನಮ್ಮ ಇತಿಹಾಸವನ್ನು ಅಳಿಸಿ ಹಾಕಲು, ನಮ್ಮ ದೇಶವನ್ನು ಅಳಿಸಿ ಹಾಕಲು, ನಮ್ಮೆಲ್ಲರನ್ನೂ ಅಳಿಸಿ ಹಾಕಲು ಅವರಿಗೆ ಆದೇಶ ನೀಡಲಾಗಿದೆ. ಈ ಅನ್ಯಾಯದ ವಿರುದ್ಧ ವಿಶ್ವದೆಲ್ಲೆಡೆಯ ಯೆಹೂದಿಗಳು ಧ್ವನಿ ಎತ್ತಬೇಕು ಎಂದು ಝೆಲೆಂಸ್ಕಿ ಆಗ್ರಹಿಸಿದ್ದಾರೆ.

ಝೆಲೆಂಸ್ಕಿ ಕೂಡಾ ಯೆಹೂದಿ ಜನಾಂಗದವರು. ಏನು ನಡೆದಿದೆ ಎಂಬುದನ್ನು ನೀವು ಗಮನಿಸಿಲ್ಲವೇ? ವಿಶ್ವದಾದ್ಯಂತದ ಯೆಹೂದಿಗಳು ಮೌನ ಮುರಿಯುವ ಕಾಲ ಈಗ ಸನ್ನಿಹಿತವಾಗಿದೆ.  ಮೌನದಿಂದಲೇ ನಾಝೀವಾದ ಹುಟ್ಟಿಕೊಂಡಿದೆ. ಆದ್ದರಿಂದ ನಾಗರಿಕರ ಹತ್ಯೆ ವಿರುದ್ಧ ಧ್ವನಿ ಎತ್ತಿ, ಉಕ್ರೇನೀಯರ ಕೊಲೆಯ ವಿರುದ್ಧ ಧ್ವನಿ ಎತ್ತಿ ಎಂದವರು ಆಗ್ರಹಿಸಿದ್ದಾರೆ. 14 ಮಕ್ಕಳ ಸಹಿತ 350ಕ್ಕೂ ಅಧಿಕ ನಾಗರಿಕರು ರಶ್ಯಾದ ದಾಳಿಯಿಂದ ಮೃತಪಟ್ಟಿರುವುದಾಗಿ ಉಕ್ರೇನ್ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ ದೂರು ನೀಡಿದ್ದು, ರಶ್ಯಾದ ವಿರುದ್ಧ ಯುದ್ಧಾಪರಾದ ವಿಚಾರಣೆಯನ್ನು ನ್ಯಾಯಾಲಯ ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News