ಇಂದು ಮೊಹಾಲಿಯಲ್ಲಿ ಮೊದಲ ಟೆಸ್ಟ್: ಭಾರತ-ಶ್ರೀಲಂಕಾ ಮುಖಾಮುಖಿ

Update: 2022-03-04 05:55 GMT

ಮೊಹಾಲಿ, ಮಾ. 3: ಮೊದಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ(ಡಬ್ಲುಟಿಸಿ) ರನ್ನರ್ಸ್-ಅಪ್ ಹಾಗೂ ವಿಶ್ವದ ಎರಡನೇ ರ್ಯಾಂಕಿನ ಟೆಸ್ಟ್ ತಂಡವಾಗಿರುವ ಭಾರತವು ಪ್ರಸ್ತುತ ಡಬ್ಲುಟಿಸಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಶ್ರೀಲಂಂಕಾ ವಿರುದ್ಧ ಶುಕ್ರವಾರದಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸೆಣಸಾಡಲಿದೆ.

  2 ಪಂದ್ಯಗಳ ಸರಣಿಯ ಮೊದಲ ಪಂದ್ಯವು ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಮಹತ್ವಪೂರ್ಣದ್ದಾಗಿದೆ. ಕೊಹ್ಲಿಗೆ ಇದು 100ನೇ ಟೆಸ್ಟ್ ಪಂದ್ಯವಾಗಿದೆ. ಭಾರತವು ಹೊಸ ನಾಯಕ ಹಾಗೂ ಮಧ್ಯಮ ಸರದಿಯಲ್ಲಿ ಹೊಸ ಆಟಗಾರರೊಂದಿಗೆ ಟೆಸ್ಟ್ ಪಂದ್ಯವನ್ನಾಡಲಿದೆ. 2012ರ ಬಳಿಕ ಮೊದಲ ಬಾರಿ ಚೇತೇಶ್ವರ ಪೂಜಾರ ಇಲ್ಲವೇ ಅಜಿಂಕ್ಯ ರಹಾನೆ ಇಲ್ಲದೆ ಆಡುತ್ತಿದೆ. ಉಪ ನಾಯಕ ಜಸ್‌ಪ್ರೀತ್ ಬುಮ್ರಾ ಸ್ವದೇಶದಲ್ಲಿ ಮೂರನೇ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ. 100ನೇ ಟೆಸ್ಟ್ ಕ್ಲಬ್‌ಗೆ ಸೇರಲಿರುವ ಕೊಹ್ಲಿ ಈ ಸಾಧನೆ ಮಾಡಿರುವ ವಿಶ್ವದ 70ನೇ ಆಟಗಾರನಾಗಲಿದ್ದಾರೆ. ಬಹುನಿರೀಕ್ಷಿತ 71ನೇ ಶತಕವನ್ನು ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ನಾಯಕನ ಸ್ಥಾನದಿಂದ ಕೆಳಗಿಳಿದಿರುವ ಕೊಹ್ಲಿ 2019ರಿಂದ ಶತಕವನ್ನೇ ಗಳಿಸಿಲ್ಲ. ಎಲ್ಲ 3 ಮಾದರಿಯ ಕ್ರಿಕೆಟ್‌ನಲ್ಲಿ ಆಡಿರುವ, ಸಂಕಷ್ಟದ ಸಮಯದಲ್ಲಿ ತಂಡದ ನಾಯಕತ್ವವನ್ನು ವಹಿಸಿದ್ದ ಕೊಹ್ಲಿ ಪಾಲಿಗೆ 100ನೇ ಟೆಸ್ಟ್ ಮಹತ್ವದ ಸಾಧನೆಯಾಗಿದೆ. ಸ್ಪಿನ್‌ದ್ವಯರಾದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜ ಮತ್ತೆ ಒಂದಾಗಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಕಳೆದ ವರ್ಷದ ನವೆಂಬರ್‌ನಿಂದ ಜಡೇಜ ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.

  ಮತ್ತೊಂದೆಡೆ ಶ್ರೀಲಂಕಾದ ಎಡಗೈ ಸ್ಪಿನ್ನರ್ ಲಸಿತ್ ಎಂಬುಲ್ಡೇನಿಯ ಕೇವಲ 13 ಟೆಸ್ಟ್ ನಲ್ಲಿ ಐದು ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಲಸಿತ್ ಭಾರತದ ಆಟಗಾರರಿಗೆ ಭೀತಿ ಹುಟ್ಟಿಸುವ ಸಾಧ್ಯತೆಯಿದೆ. ಯುವ ಬ್ಯಾಟರ್ ಪಥುಮ್ ನಿಶಾಂಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 63.47 ಸರಾಸರಿ ಹೊಂದಿದ್ದಾರೆ. ನಾಯಕ ಡಿಮುತ್ ಕರುಣರತ್ನೆ ಇತ್ತೀಚೆಗಿನ ವರ್ಷಗಳಲ್ಲಿ ವಿಶ್ವದ ಓರ್ವ ಶ್ರೇಷ್ಠ ಆರಂಭಿಕ ಆಟಗಾರನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News