ಆಸ್ಟ್ರೇಲಿಯದ ಕ್ರಿಕೆಟ್ ದಂತಕತೆ ಶೇನ್ ವಾರ್ನ್ ನಿಧನ

Update: 2022-03-04 15:27 GMT
ಶೇನ್ ವಾರ್ನ್ (PTI)

ಮೆಲ್ಬೋರ್ನ್, ಮಾ.5: ಆಸ್ಟ್ರೇಲಿಯದ ಕ್ರಿಕೆಟ್ ಲೆಜೆಂಡ್ ಹಾಗೂ ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ನಿಧನರಾಗಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ವಾರ್ನ್ ಅವರಿಗೆ 52 ವರ್ಷ ವಯಸ್ಸಾಗಿತ್ತು. ವಾರ್ನ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.

ಥಾಯ್ಲೆಂಡ್‌ನ ವಿಲ್ಲಾದಲ್ಲಿದ್ದ ವಾರ್ನ್ ಅವರನ್ನು ಉಳಿಸಿಕೊಳ್ಳಲು ವೈದ್ಯಕೀಯ ಸಿಬ್ಬಂದಿ ಎಲ್ಲ ಪ್ರಯತ್ನಪಟ್ಟರೂ ಅದಕ್ಕೆ ಅವರು ಸ್ಪಂದಿಸಲಿಲ್ಲ ಎಂದು ವಾರ್ನ್ ಅವರ ಸಿಬ್ಬಂದಿ ವರ್ಗ ಶನಿವಾರ ಬೆಳಗ್ಗೆ ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಒಟ್ಟು 708 ವಿಕೆಟ್‌ಗಳನ್ನು ಕಬಳಿಸಿರುವ ವಾರ್ನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 293 ವಿಕೆಟ್‌ಗಳನ್ನು ಪಡೆದಿರುವ ಅವರು ಆಸ್ಟ್ರೇಲಿಯದ ಪರ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ 300ಕ್ಕೂ ಅಧಿಕ ಪಂದ್ಯಗಳನ್ನು ಆಡಿದ್ದಾರೆ.

    2007ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಹಾಗೂ ಕೋಚ್ ಆಗಿದ್ದರು. ರಾಜಸ್ಥಾನವು 2008ರ ಆವೃತ್ತಿಯ ಐಪಿಎಲ್ ಜಯಿಸಲು ನೆರವಾಗಿದ್ದರು. ಮೈದಾನದ ಒಳಗೆ ಹಾಗೂ ಹೊರಗೆ ಉತ್ಸಾಹಿ ವ್ಯಕ್ತಿತ್ವದ ವಾರ್ನ್ ವೀಕ್ಷಕವಿವರಣೆಗಾರರಾಗಿಯೂ ಯಶಸ್ಸು ಕಂಡಿದ್ದರು.

1992 ಹಾಗೂ 2007ರ ನಡುವಿನ 15 ವರ್ಷಗಳ ವೃತ್ತಿಜೀವನದಲ್ಲಿನ ಅಪ್ರತಿಮ ಸಾಧನೆಗಳಿಗಾಗಿ ವಿಸ್ಡನ್‌ನ ಶತಮಾನದ ಐವರು ಕ್ರಿಕೆಟಿಗರಲ್ಲಿ ಒಬ್ಬರೆಂಬ ಗೌರವಕ್ಕೆ ಪಾತ್ರರಾಗಿದ್ದ ಅವರು 2013ರಲ್ಲಿ ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾಗಿದ್ದರು.

1999ರಲ್ಲಿ ಆಸ್ಟ್ರೇಲಿಯವು ವಿಶ್ವಕಪ್ ಜಯಿಸಲು ನೆರವಾಗಿದ್ದ ವಾರ್ನ್ ಆ್ಯಶಸ್ ಕ್ರಿಕೆಟ್ ಸರಣಿಯಲ್ಲಿ ಗರಿಷ್ಠ ವಿಕೆಟ್(195)ಪಡೆದ ಸಾಧನೆ ಮಾಡಿದ್ದಾರೆ.

ವಾರ್ನ್ ಅವರು ಶುಕ್ರವಾರ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ರಾಡ್ನಿ ಮಾರ್ಷ್ ನಿಧನಕ್ಕೆ ಸಂತಾಪ ಸೂಚಿಸಿ ಕೊನೆಯ ಬಾರಿ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News