ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಸಿದ್ಧ: ರಷ್ಯಾ
ವಿಶ್ವಸಂಸ್ಥೆ: ಉಕ್ರೇನ್‌ನಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ವಿದ್ಯಾರ್ಥಿಗಳು ಹಾಗೂ ಇತರ ವಿದೇಶೀಯರನ್ನು ಅಲ್ಲಿಂದ ಸುರಕ್ಷಿತವಾಗಿ ಸ್ಥಳಾಂತರಿಸಲು ತಾನು ಸಿದ್ಧನಾಗಿದ್ದೇನೆ. ಪೂರ್ವ ಉಕ್ರೇನ್ ನಗರಗಳಾದ ಖಾರ್ಕಿವ್ ಮತ್ತು ಸುಮಿಯಿಂದ ಹೊರ ತೆರಳ ಬಯಸುವವರನ್ನು ಕರೆದೊಯ್ಯಲು ರಸ್ತೆ ದಾಟಿನ ಬಳಿ ರಷ್ಯಾದ ಬಸ್ಸುಗಳು ಸಿದ್ಧವಾಗಿವೆ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ರಷ್ಯಾ ತಿಳಿಸಿದೆ.
ಉಕ್ರೇನ್‌ನ ಝಪೊರಿಝ್ಯ ಅಣುಸ್ಥಾವದ ಮೇಲೆ ರಷ್ಯಾದ ದಾಳಿಯ ಬಳಿಕ ಶುಕ್ರವಾರ 15 ಸದಸ್ಯರ ವಿಶ್ವಸಂಸ್ಥೆ ಭದ್ರತಾ ಸಮಿತಿಯ ತುರ್ತು ಸಭೆ ನಡೆದಿದೆ.
ಅಮೆರಿಕ, ಬ್ರಿಟನ್, ಐರ್ಲ್ಯಾಂಡ್, ನಾರ್ವೆ, ಅಲ್ಬೇನಿಯಾ ಮತ್ತು ನಾರ್ವೆಯ ಕೋರಿಕೆ ಮೇರೆಗೆ ನಡೆದಿದ್ದ ಸಭೆಯಲ್ಲಿ ರಷ್ಯಾ ಈ ಭರವಸೆ ನೀಡಿದೆ.
ಉಕ್ರೇನ್‌ನಲ್ಲಿ ಸಿಕ್ಕಿಬಿದ್ದಿರುವ ವಿದೇಶಿ ರಾಷ್ಟ್ರೀಯರ ಶಾಂತಿಯುತ ಸ್ಥಳಾಂತರವನ್ನು ಖಾತರಿಪಡಿಸಲು ರಷ್ಯಾ ಎಲ್ಲಾ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ರಷ್ಯಾದ ಬೆಲ್ಗೊರೊಡ್ ವಲಯದಲ್ಲಿ 130 ಬಸ್ಸುಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಚೆಕ್ ಪಾಯಿಂಟ್‌ಗಳಲ್ಲಿ ತಾತ್ಕಾಲಿಕ ವಸತಿ, ವಿಶ್ರಾಂತಿಗೆ ಸ್ಥಳ ಮತ್ತು ಬಿಸಿ ಆಹಾರದ ಜೊತೆಗೆ ಸಂಚಾರಿ ವೈದ್ಯಕೀಯ ನೆರವು ಘಟಕವನ್ನೂ ವ್ಯವಸ್ಥೆ ಮಾಡಲಾಗಿದೆ. ಸ್ಥಳಾಂತರಗೊಂಡವರನ್ನು ಬಸ್ಸುಗಳ ಮೂಲಕ ಬೆಲ್ಗೊರೊಡ್ ಗೆ ಕರೆದೊಯ್ದು ಅಲ್ಲಿಂದ ವಿಮಾನದ ಮೂಲಕ ಅವರ ತಾಯ್ನಾಡಿಗೆ ಕಳುಹಿಸಲಾಗುವುದು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ವಿಶ್ವಸಂಸ್ಥೆಗೆ ರಷ್ಯಾದ ಖಾಯಂ ಪ್ರತಿನಿಧಿ ವ್ಯಾಸಿಲಿ ನೆಬೆಂಝಿಯಾ ಹೇಳಿದ್ದಾರೆ.
ಇದೇ ವೇಳೆ, ಉಕ್ರೇನ್ ಖಾರ್ಕಿವ್ ಮತ್ತು ಸುಮಿ ನಗರದಲ್ಲಿ 3,700ಕ್ಕೂ ಅಧಿಕ ಭಾರತೀಯರನ್ನು ಬಲವಂತವಾಗಿ ಇರಿಸಿಕೊಂಡಿದ್ದಾರೆ ಎಂದವರು ಆರೋಪಿಸಿದ್ದಾರೆ.
ನಗರ ಬಿಟ್ಟು ತೆರಳಲು ಭಯೋತ್ಪಾದಕರು ಬಿಡುತ್ತಿಲ್ಲ. ಇದು ಉಕ್ರೇನೀಯರ ಮೇಲಷ್ಟೇ ಅಲ್ಲ, ವಿದೇಶೀಯರ ಮೇಲೂ ಪರಿಣಾಮ ಬೀರಿದೆ. ಉಕ್ರೇನ್ ರಾಷ್ಟ್ರೀಯರು ಒತ್ತೆಯಾಳಾಗಿ ಇರಿಸಿಕೊಂಡ ವಿದೇಶೀ ಪ್ರಜೆಗಳ ಸಂಖ್ಯೆ ಆಘಾತಕಾರಿಯಾಗಿದೆ. ಖಾರ್ಕಿವ್‌ನಲ್ಲಿ 3,189 ಭಾರತೀಯ ಪ್ರಜೆಗಳು, ಸುಮಾರು 2,700ರಷ್ಟು ವಿಯೆಟ್ನಾಮ್ ಪ್ರಜೆಗಳು, ಚೀನಾದ 202 ಪ್ರಜೆಗಳು ಒತ್ತೆಯಾಳುಗಳಾಗಿದ್ದಾರೆ.
ಸುಮಿಯಲ್ಲಿ ಭಾರತದ 576, ಘಾನಾದ 101, ಚೀನದ 121 ಪ್ರಜೆಗಳು ಒತ್ತೆಯಾಳುಗಳಾಗಿದ್ದಾರೆ . ಉಕ್ರೇನ್‌ನಲ್ಲಿನ ಮೂಲಭೂತವಾದಿಗಳು ಮತ್ತು ಉಗ್ರಗಾಮಿಗಳಿಗೆ ಪಾಶ್ಚಿಮಾತ್ಯ ದೇಶಗಳು ಭದ್ರತೆ ಒದಗಿಸುತ್ತಿವೆ ಎಂದು ವ್ಯಾಸಿಲಿ ನೆಬೆಂಝಿಯಾ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯಲ್ಲಿನ ಉಕ್ರೇನ್‌ನ ಖಾಯಂ ಪ್ರತಿನಿಧಿ ಸೆರ್ಗೈ ಕಿಸ್ಲಿಟ್ಸ್ಯಾ, ಸುಳ್ಳು ಪ್ರಸಾರ ಮಾಡುವುದನ್ನು ನಿಲ್ಲಿಸಿ, ಮಾಸ್ಕೋದ ಜತೆಗೆ ಸಂಪರ್ಕದಲ್ಲಿದ್ದರೆ ನಿಮಗೆ ಏನು ನಡೆಯುತ್ತಿದೆ ಎಂಬುದು ತಿಳಿಯುತ್ತಿತ್ತು ಎಂದರು.
ಸಂಘರ್ಷ ಪೀಡಿತ ಪ್ರದೇಶದಿಂದ ವಿದೇಶಿ ವಿದ್ಯಾರ್ಥಿಗಳು ಹೊರತೆರಳಲು ಸುರಕ್ಷಿತ ಮಾನವೀಯ ಕಾರಿಡಾರ್ ನಿರ್ಮಾಣ ಖಾತರಿಪಡಿಸಲು ನಿಮ್ಮ ಪಡೆಗಳಿಗೆ ಸೂಚಿಸಿ ಎಂದವರು ಆಗ್ರಹಿಸಿದರು.
ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ ಎಂಬ ಯಾವುದೇ ವರದಿ ಬಂದಿಲ್ಲ ಎಂದು ಭಾರತದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿದ್ದಾರೆ.
ʼಉಕ್ರೇನ್‌ನಲ್ಲಿ ಯಾವುದೇ ವಿದ್ಯಾರ್ಥಿ ಒತ್ತೆಯಾಳಾಗಿ ಇರುವ ಯಾವುದೇ ಮಾಹಿತಿ ಬಂದಿಲ್ಲ. ಖಾರ್ಕಿವ್ ಮತ್ತು ನೆರೆಯ ಪ್ರದೇಶದಿಂದ ವಿದ್ಯಾರ್ಥಿಗಳನ್ನು ಪಶ್ಚಿಮ ಪ್ರಾಂತ್ಯದತ್ತ ಕರೆದೊಯ್ಯಲು ವಿಶೇಷ ರೈಲುಗಳ ವ್ಯವಸ್ಥೆ ಮಾಡುವಲ್ಲಿ ಉಕ್ರೇನ್ ಅಧಿಕಾರಿಗಳ ನೆರವು ಕೋರಿದ್ದೇವೆ. ರಷ್ಯಾ, ರೊಮಾನಿಯಾ, ಪೋಲಂಡ್, ಹಂಗೇರಿ, ಸ್ಲೊವಾಕಿಯಾ ಮತ್ತು ಮೊಲ್ದೊವಾ ಸಹಿತ ಈ ವಲಯದಲ್ಲಿರುವ ದೇಶಗಳೊಂದಿಗೆ ಭಾರತ ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸಿದೆ. ಇದನ್ನು ಸಾಧ್ಯವಾಗಿಸಲು ಸಹಾಯ ನೀಡಿದ ಉಕ್ರೇನ್ ಆಡಳಿತವನ್ನು ನಾವು ಶ್ಲಾಘಿಸುತ್ತೇವೆ ಎಂದವರು ಹೇಳಿದ್ದಾರೆ.
ಈ ಮಧ್ಯೆ, ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ಉಕ್ರೇನ್ ಸಂಘರ್ಷದಲ್ಲಿ ಪರಮಾಣು ಶಸ್ತ್ರಾಸ್ತ್ರ ಬಳಕೆಯ ಅಪಾಯದ ಕುರಿತು ನಡೆಯುತ್ತಿರುವ ಚರ್ಚೆಯ ಜತೆಗೆ, ಉಕ್ರೇನ್‌ನಲ್ಲಿ ಭಾರತೀಯರ ಸಹಿತ ಹಲವು ಅಮಾಯಕ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಎದುರಾಗಿರುವ ಅಪಾಯ ಮತ್ತು ಉದ್ಭವಿಸಿರುವ ಮಾನವೀಯ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಯಬೇಕೆಂದು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತ್ರಿಮೂರ್ತಿ ಆಗ್ರಹಿಸಿದ್ದಾರೆ.