ಅಣುಸ್ಥಾವರಕ್ಕೆ ಹಾನಿ ಎಸಗುವಂತೆ ರಷ್ಯಾಕ್ಕೆ ಝೆಲೆಂಸ್ಕಿ ಪ್ರಚೋದನೆ: ಉಕ್ರೇನ್ ಮಾಜಿ ಪ್ರಧಾನಿ ಆರೋಪ
ಕೀವ್: ಯುರೋಪ್ ಖಂಡದ ಅತೀ ದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಝಪೊರಿಝ್ಯಾಕ್ಕೆ ಹಾನಿ ಎಸಗಲು ರಷ್ಯಾ ಸೇನೆಯನ್ನು ಉಕ್ರೇನ್ ಅಧ್ಯಕ್ಷ ಝೆಲೆಂಸ್ಕಿ ಪ್ರಚೋದಿಸಿದ್ದಾರೆ. ಈ ಮೂಲಕ ಉಕ್ರೇನ್ ವಾಯುಕ್ಷೇತ್ರವನ್ನು ವಿಮಾನ ಸಂಚಾರ ನಿಷೇಧ ವಲಯವನ್ನಾಗಿಸಲು ಪಾಶ್ಚಿಮಾತ್ಯ ದೇಶಗಳ ಮನವರಿಕೆ ಮಾಡಬಹುದು ಎಂಬುದು ಅವರ ತಂತ್ರವಾಗಿದೆ ಎಂದು ಉಕ್ರೇನ್ ಮಾಜಿ ಪ್ರಧಾನಿ ಮಿಕೊಲ ಅರಝೋವ್ ಆರೋಪಿಸಿದ್ದಾರೆ.
ಖಂಡಿತಾ ಇದೊಂದು ಉದ್ದೇಶಪೂರ್ವಕ ಪ್ರಚೋದನೆಯಾಗಿದೆ, ಯಾಕೆಂದರೆ ವಿವೇಕ ಇರುವ ಯಾವುದೇ ಯೋಧ (ರಷ್ಯಾನ್ ಆಗಿರಲಿ ಅಥವಾ ಉಕ್ರೇನಿಯನ್ ಆಗಿರಲಿ) ಯುರೋಪ್‌ನ ಅತೀ ದೊಡ್ಡ, 6 ಪರಮಾಣು ವಿದ್ಯುತ್ ಘಟಕ ಇರುವ ಪರಮಾಣು ಸ್ಥಾವರದ ಪ್ರದೇಶದಲ್ಲಿ ಈ ರೀತಿಯ ಕೃತ್ಯ ಎಸಗುವ ಧೈರ್ಯ ತೋರಲು ಸಾಧ್ಯವೇ ಇಲ್ಲ. ಇಂತಹ ಮೇಲ್ಮಟ್ಟದ ಪರಮಾಣು ವ್ಯವಸ್ಥೆಯಲ್ಲಿ ಸಂಭವಿಸುವ ಕಿರು ಬೆಂಕಿ ಅನಾಹುತವೂ ತುರ್ತು ಪರಿಸ್ಥಿತಿಗೆ ಕಾರಣವಾಗಬಹುದು ಎಂದವರು ಹೇಳಿದ್ದಾರೆ.
ಉಕ್ರೇನ್‌ನ ವಿಧ್ವಂಸಕರು ಝಪೋರಿಜ್ಝಿಯಾದ ಅಣುಸ್ಥಾವರಕ್ಕೆ ಬೆಂಕಿ ಹಚ್ಚಿದ್ದು ಇದೊಂದು ಬೃಹತ್ ಪ್ರಚೋದನೆ ಕ್ರಮವಾಗಿದೆ ಎಂದು ರಷ್ಯಾದ ರಕ್ಷಣಾ ಇಲಾಖೆ ಶುಕ್ರವಾರ ಹೇಳಿತ್ತು. ಈ ಪ್ರದೇಶ ಫೆಬ್ರವರಿ 28ರಿಂದ ರಷ್ಯಾದ ನಿಯಂತ್ರಣದಲ್ಲಿದೆ. ಆದರೆ ಗುರುವಾರ ರಾತ್ರಿ, ಅಣುಸ್ಥಾವರಕ್ಕೆ ಹೊಂದಿಕೊಂಡಿರುವ ಪ್ರದೇಶಕ್ಕೆ ನುಗ್ಗಿದ ಉಕ್ರೇನ್ ಪ್ರಜೆಗಳು, ಬೃಹತ್ ಪ್ರಚೋದನೆಯ ಪ್ರಯತ್ನ ನಡೆಸಿದ್ದು ಇಲ್ಲಿದ್ದ ರಷ್ಯಾದ ಕಾವಲು ಯೋಧನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಷ್ಯಾದ ರಕ್ಷಣಾ ಇಲಾಖೆಯ ವಕ್ತಾರರು ಹೇಳಿದ್ದರು.