ಪಾಕ್ ವಿರುದ್ಧದ ಪಂದ್ಯದಲ್ಲಿ ವಿಶ್ವಕಪ್ ದಾಖಲೆ ಬರೆದ ಮಿಥಾಲಿ ರಾಜ್
ಹೊಸದಿಲ್ಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ರವಿವಾರ ಮೌಂಟ್ ಮಂಗನೂಯಿಯ ಬೇ ಓವಲ್‍ನಲ್ಲಿ ಪಾಕಿಸ್ತಾನ ವಿರುದ್ಧ ಮಹಿಳಾ ವಿಶ್ವಕಪ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ವಿಶ್ವದಾಖಲೆ ಬರೆದರು. ಈ ಹಿಂದೆ ಭಾರತದ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮಿಥಾಲಿ ರಾಜ್ ಸರಿಗಟ್ಟಿದರು.
ರವಿವಾರ ಮೈದಾನಕ್ಕೆ ಇಳಿದ ಮಿಥಾಲಿ ರಾಜ್ ಆರು ಮಹಿಳಾ ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಿದ ಮೊಟ್ಟಮೊದಲ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2000ನೇ ಇಸವಿಯ ವಿಶ್ವಕಪ್ ಮೂಲಕ ಪದಾರ್ಪಣೆ ಮಾಡಿದ ಅವರು, 2005, 2009, 2013, 2017 ಮತ್ತು 2022ನೇ ವಿಶ್ವಕಪ್‍ನಲ್ಲಿ ಭಾರತ ತಂಡದ ಪರ ಆಡಿದ ಸಾಧನೆ ಮಾಡಿದರು. ನ್ಯೂಝಿಲೆಂಡ್‍ನ ದೆಬ್ಬೀ ಹಾಕ್ಲೆ ಮತ್ತು ಇಂಗ್ಲೆಂಡ್‍ನ ಚಾರ್ಲೊಟ್ ಎಡ್ವಡ್ರ್ಸ್ ಅವರ ದಾಖಲೆಯನ್ನು ಮಿಥಾಲಿರಾಜ್ ರವಿವಾರ ಮುರಿದರು. ಏತನ್ಮಧ್ಯೆ ತಂಡದ ಸಹ ಆಟಗಾರ್ತಿ ಜೂಲನ್ ಗೋಸ್ವಾಮಿ, ಐದು ವಿಶ್ವಕಪ್ ಟೂರ್ನಿಗಳಲ್ಲಿ ಆಡುವ ಮೂಲಕ ಎರಡನೇ ಸ್ಥಾನಕ್ಕೇರಿದರು.
ಭಾರತದ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರು ಮಾತ್ರ 1992, 1996, 1999, 2003, 2007 ಮತ್ತು 2011ರ ವಿಶ್ವಕಪ್‍ನಲ್ಲಿ ಆಡಿದ ಸಾಧನೆ ಮಾಡಿದ್ದರು. ಮಿಥಾಲಿ ಹಾಗೂ ಸಚಿನ್ ಹೊರತುಪಡಿಸಿದರೆ ಪಾಕಿಸ್ತಾನದ ಬ್ಯಾಟಿಂಗ್ ದಿಗ್ಗಜ ಜಾವೇದ್ ಮಿಯಾಂದಾದ್ ಅವರು ಮಾತ್ರ ಆರುವಿಶ್ವಕಪ್‍ಗಳಲ್ಲಿ ಆಡಿರುವ ದಾಖಲೆ ಹೊಂದಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಭಾರತ ಇತ್ತೀಚಿನ ವರದಿಗಳು ಬಂದಾಗ, ಭಾರತ 14 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದೆ. ಸ್ಮೃತಿ ಮಂದಾನ 31 ಹಾಗೂ ದೀಪ್ತಿ ಶರ್ಮಾ ಕ್ರೀಸ್‍ನಲ್ಲಿದ್ದಾರೆ. ಭಾರತದ ಸ್ಕೋರ್ 4 ಆಗಿದ್ದಾಗ ಶಫಾಲಿ ವರ್ಮಾ (0) ಅವರ ವಿಕೆಟನ್ನು ಭಾರತ ಕಳೆದುಕೊಂಡಿತ್ತು.