ಕಪಿಲ್‌ದೇವ್ ದಾಖಲೆ ಹಿಂದಿಕ್ಕಿ ಭಾರತದ ಎರಡನೇ ಗರಿಷ್ಠ ವಿಕೆಟ್ ಸರದಾರನಾದ ಅಶ್ವಿನ್

Update: 2022-03-06 16:45 GMT

 ಮೊಹಾಲಿ, ಮಾ.6: ಭಾರತದ ಪ್ರಮುಖ ಆಫ್-ಸ್ಪಿನ್ನರ್ ಆರ್.ಅಶ್ವಿನ್ ಲೆಜೆಂಡರಿ ಕ್ರಿಕೆಟಿಗ ಕಪಿಲ್‌ದೇವ್(434 ವಿಕೆಟ್)ದಾಖಲೆಯನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಗರಿಷ್ಠ ಸಂಖ್ಯೆಯ ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು. ತನ್ನ 85ನೆ ಪಂದ್ಯದಲ್ಲಿ ಈ ಸಾಧನೆ ಮಾಡಿದರು.

35ರ ಹರೆಯದ ಅಶ್ವಿನ್ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದರು.ಲಂಕಾ ವಿರುದ್ಧದ ಪಂದ್ಯಕ್ಕಿಂತ ಮೊದಲು ಒಟ್ಟು 430 ವಿಕೆಟ್‌ಗಳನ್ನು ಉರುಳಿಸಿದ್ದ ಅಶ್ವಿನ್ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್ ಹಾಗೂ 2ನೇ ಇನಿಂಗ್ಸ್‌ನಲ್ಲಿ ಇನ್ನೂ ಮೂರು ವಿಕೆಟ್ ಗಳಿಸುವುದರೊಂದಿಗೆ ಕಪಿಲ್ ಅವರ ದಾಖಲೆಯನ್ನು ಮುರಿದರು.

ಕಪಿಲ್ 131 ಪಂದ್ಯಗಳಲ್ಲಿ 434 ವಿಕೆಟ್‌ಗಳನ್ನು ಕಬಳಿಸಿದ್ದರು. ಲೆಜೆಂಡರಿ ಅನಿಲ್ ಕುಂಬ್ಳೆ 132 ಪಂದ್ಯಗಳಲ್ಲಿ ಒಟ್ಟು 619 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಪರ ಗರಿಷ್ಠ ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.

ಅಶ್ವಿನ್ ಮೊದಲ ಇನಿಂಗ್ಸ್‌ನಲ್ಲಿ 49 ರನ್‌ಗೆ 2 ವಿಕೆಟ್ ಪಡೆದು ಭಾರತವು 400 ರನ್ ಮುನ್ನಡೆ ಪಡೆಯಲು ನೆರವಾಗಿದ್ದರು.

ಕುಂಬ್ಳೆ, ಕಪಿಲ್ ಹಾಗೂ ಹರ್ಭಜನ್ ಸಿಂಗ್ ಬಳಿಕ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 400ಕ್ಕೂ ಅಧಿಕ ವಿಕೆಟ್ ಪಡೆದಿರುವ ಭಾರತದ 4ನೇ ಬೌಲರ್. ಅಶ್ವಿನ್  ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ ಅವರು ಕಪಿಲ್‌ರಲ್ಲದೆ ನ್ಯೂಝಿಲ್ಯಾಂಡ್‌ನ ದಿಗ್ಗಜ ರಿಚರ್ಡ್ ಹ್ಯಾಡ್ಲಿ(431) ಹಾಗೂ ಶ್ರೀಲಂಕಾದ ರಂಗನ ಹೆರಾತ್(433)ದಾಖಲೆಯನ್ನೂ ಪುಡಿಗಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News