ಶೇನ್ ವಾರ್ನ್ ʼಅತ್ಯುತ್ತಮ ಸ್ಪಿನ್ ಬೌಲರ್ʼ ಎಂದು ಹೇಳುವುದಿಲ್ಲ ಎಂದ ಗಾವಸ್ಕರ್: ಸಾಮಾಜಿಕ ತಾಣದಾದ್ಯಂತ ಆಕ್ರೋಶ

Update: 2022-03-07 14:35 GMT

ಹೊಸದಿಲ್ಲಿ: ಆಸ್ಟ್ರೇಲಿಯಾ ಕ್ರಿಕೆಟಿಗ ಶೇನ್ ವಾರ್ನ್ ಅವರ ಅಕಾಲಿಕ ನಿಧನಕ್ಕೆ ಆಘಾತ ವ್ಯಕ್ತಪಡಿಸಿರುವ ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್, ತಮ್ಮ ಮಾತಿನ ನಡುವೆ ಶೇನ್ ವಾರ್ನ್ ಅವರು ಕ್ರಿಕೆಟ್ ಜಗತ್ತಿಗೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರಾದರೂ ಅವರು ಸಾರ್ವಕಾಲಿಕ ಮಹಾನ್ ಸ್ಪಿನ್ ಬೌಲರ್ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಇದೀಗ ವಿವಾದಕ್ಕೆ ತುತ್ತಾಗಿದೆ.

ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ ಅವರು "ಭಾರತೀಯ ಸ್ಪಿನ್ನರ್‍ಗಳು ಹಾಗೂ ಮುತ್ತಯ್ಯ ಮುರಳೀಧರನ್ ಶೇನ್ ಅವರಿಗಿಂತ ಉತ್ತಮ ಸ್ಪಿನ್ ಬೌಲರ್‍ಗಳಾಗಿದ್ಧಾರೆ" ಎಂದು ಹೇಳಿದ್ದಾರೆ.

"ಭಾರತದ ವಿರುದ್ಧ ಶೇನ್ ವಾರ್ನ್ ಸಾಧನೆಯನ್ನು ನೋಡಿ, ಅದು ಸಾಮಾನ್ಯವಾಗಿದೆ" ಎಂದು ಗಾವಸ್ಕರ್ ಹೇಳಿದ್ದಾರೆ. ಇದೀಗ ಅವರು ಮತ್ತೊಂದು ವೀಡಿಯೊದಲ್ಲಿ, "ತಾನು ಈ ಹೇಳಿಕೆ ನೀಡಿರುವ ಸಮಯ, ಸಂದರ್ಭ ಸರಿಯಾದುದಲ್ಲ" ಎಂದು ಅಚಾತುರ್ಯವನ್ನು ಒಪ್ಪಿಕೊಂಡಿದ್ದಾರೆ.

"ಸ್ಪಿನ್ ಬೌಲರ್ ಗಳ ವಿರುದ್ಧ ಉತ್ತಮವಾಗಿ ಆಡುವ ಭಾರತೀಯ ಆಟಗಾರರ ವಿರುದ್ಧ ಶೇನ್ ಅವರಿಗೆ ಸಾಕಷ್ಟು ಯಶಸ್ಸು ದೊರೆತಿರಲಿಲ್ಲ.ಅವರನ್ನು ಅತ್ಯುತ್ತಮ ಸ್ಪಿನ್ ಬೌಲರ್ ಎಂದು ಹೇಳುವುದಿಲ್ಲ. ಭಾರತದ ವಿರುದ್ಧ ಬಹಳಷ್ಟು ಯಶಸ್ಸು ಪಡೆದ ಮುತ್ತಯ್ಯ ಮುರಳೀಧರನ್ ನನ್ನ ಪ್ರಕಾರ ಅವರಿಗಿಂತ ಉತ್ತಮ ಬೌಲರ್" ಎಂದು ಗಾವಸ್ಕರ್ ಹೇಳಿದರು.

"ಅವರು ಜೀವನವನ್ನು ಸಂಪೂರ್ಣವಾಗಿ ಆನಂದಿಸುವವರಾಗಿದ್ದರು ಹಾಗೂ ಅವರು ಅದೇ ರೀತಿ ಜೀವಿಸಿದರು, ಪ್ರಾಯಶಃ ಅದನ್ನು ಅವರ ಹೃದಯಕ್ಕೆ ತಾಳಿಕೊಳ್ಳಲು ಸಾಧ್ಯವಾಗಲಿಲ್ಲ ಹಾಗೂ ಅವರು ಬಹಳ ಬೇಗನೇ ನಮ್ಮನ್ನು ಅಗಲಿದರು" ಎಂದು ಗಾವಸ್ಕರ್ ಹೇಳಿದರು.

ಆದರೆ ಗಾವಸ್ಕರ್ ಅವರ ಹೇಳಿಕೆಗಳು ಶೇನ್ ವಾರ್ನ್ ಅವರ ಅಭಿಮಾನಿಗಳಿಗೆ ಅಸಮಾಧಾನವುಂಟು ಮಾಡಿದ್ದು ಹಲವರು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News