ದ್ವಿತೀಯ ಟೆಸ್ಟ್: ಶ್ರೀಲಂಕಾ ವಿರುದ್ಧ ಭಾರತ 252 ರನ್‌ಗೆ ಆಲೌಟ್

Update: 2022-03-12 14:00 GMT

ಬೆಂಗಳೂರು, ಮಾ.12: ಅಗ್ರ ಸರದಿ ಬ್ಯಾಟರ್‌ಗಳ ವೈಫಲ್ಯದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಸಿಡಿಸಿದ ಅರ್ಧಶತಕದ(92, 98 ಎಸೆತ, 10 ಬೌಂಡರಿ, 4 ಸಿಕ್ಸರ್)ಸಹಾಯದಿಂದ ಭಾರತವು ಶ್ರೀಲಂಕಾ ವಿರುದ್ಧ ಶನಿವಾರ ಆರಂಭವಾದ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 59.1 ಓವರ್‌ಗಳಲ್ಲಿ 252 ರನ್ ಗಳಿಸಿ ಆಲೌಟಾಗಿದೆ.

ಹಗಲು-ರಾತ್ರಿ ಟೆಸ್ಟ್‌ನ ಮೊದಲ ದಿನ ಶ್ರೀಲಂಕಾದ ಸ್ಪಿನ್ನರ್‌ಗಳು 8 ವಿಕೆಟ್‌ಗಳನ್ನು ಹಂಚಿಕೊಂಡಿದ್ದು, ಶ್ರೇಯಸ್ ಭಾರತದ ಪರ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದರು.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ 86 ರನ್ ಗಳಿಸುವಷ್ಟರಲ್ಲಿ ಅಗ್ರ ನಾಲ್ವರು ಬ್ಯಾಟರ್‌ಗಳನ್ನು ಕಳೆದುಕೊಂಡಿತು. ಆಗ ರಿಷಭ್ ಪಂತ್(39 ರನ್) ಅವರೊಂದಿಗೆ ಕೈಜೋಡಿಸಿದ ಶ್ರೇಯಸ್ ಅಯ್ಯರ್ 5ನೇ ವಿಕೆಟ್‌ಗೆ 40 ರನ್ ಸೇರಿಸಿದರು. ಆ ನಂತರ ಅಶ್ವಿನ್(13) ಹಾಗೂ ಅಕ್ಷರ್ ಪಟೇಲ್(9) ಅವರೊಂದಿಗೆ ಕ್ರಮವಾಗಿ 7ನೇ ಹಾಗೂ 8ನೇ ವಿಕೆಟ್‌ಗೆ 35 ಹಾಗೂ 32 ರನ್ ಜೊತೆಯಾಟ ನಡೆಸಿ ತಂಡದ ಸ್ಕೋರನ್ನು 252ಕ್ಕೆ ತಲುಪಿಸಿದರು.

ಶ್ರೀಲಂಕಾದ ಪರ ಸ್ಪಿನ್ನರ್‌ಗಳಾದ ಲಸಿತ್ ಎಂಬುಲ್ಡೇನಿಯಾ(3-94), ಪ್ರವೀಣ್ ಜಯವಿಕ್ರಮ(3-81)ತಲಾ 3 ವಿಕೆಟ್ ಪಡೆದರೆ, ಧನಂಜಯ ಡಿಸಿಲ್ವಾ(2-32) ಎರಡು ವಿಕೆಟ್ ಪಡೆದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News