ರಶ್ಯದ ತಗಾದೆಯಿಂದ ಇರಾನ್ ಪರಮಾಣು ಒಪ್ಪಂದ ವಿಫಲಗೊಳ್ಳುವ ಸಾಧ್ಯತೆ: ಫ್ರಾನ್ಸ್ ಎಚ್ಚರಿಕೆ

Update: 2022-03-12 18:46 GMT

ಪ್ಯಾರಿಸ್, ಮಾ.12: ಇರಾನ್ನೊಂದಿಗಿನ ತನ್ನ ವ್ಯಾಪಾರವನ್ನು ಖಾತರಿಪಡಿಸಿಕೊಳ್ಳಬೇಕೆಂಬ ರಶ್ಯದ ತಗಾದೆ ಬಹುತೇಕ ಅಂತಿಮಗೊಂಡಿರುವ ಇರಾನ್ ಪರಮಾಣು ಒಪ್ಪಂದದ ವೈಪಲ್ಯಕ್ಕೆ ಕಾರಣವಾಗಬಹುದು ಎಂದು ಫ್ರಾನ್ಸ್, ಬ್ರಿಟನ್ ಮತ್ತು ಜರ್ಮನಿ ಶನಿವಾರ ಎಚ್ಚರಿಸಿದೆ.
ಜೆಸಿಪಿಒಎ ಒಪ್ಪಂದ(ಪರಮಾಣು ಕಾರ್ಯಕ್ರಮಕ್ಕೆ ಇರಾನ್ ಕಡಿವಾಣ ಹಾಕಿದರೆ ಆ ದೇಶದ ವಿರುದ್ಧದ ನಿರ್ಬಂಧ ರದ್ದುಗೊಳಿಸುವುದು) ಎಂದು ಕರೆಯಲಾಗುವ ಪರಮಾಣು ಒಪ್ಪಂದದ ಮರುಸ್ಥಾಪನೆಯ ಕುರಿತ ಸಂಧಾನ ಮಾತುಕತೆ ಅಂತಿಮ ಹಂತ ತಲುಪಿದೆ. ಆದರೆ, ಕಳೆದ ಶನಿವಾರ ರಶ್ಯ ವಿದೇಶ ಸಚಿವ ಸೆರ್ಗೈ ಲಾವ್ರೋವ್ ಅನಿರೀಕ್ಷಿತವಾಗಿ ಹೊಸ ಬೇಡಿಕೆಯನ್ನು ಪ್ರಸ್ತಾವಿಸಿದ್ದರು. ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಜಾರಿಗೊಳಿಸಿರುವ ನಿರ್ಬಂಧಗಳು ರಶ್ಯ-ಇರಾನ್ ನಡುವಿನ ವ್ಯಾಪಾರ ಸಂಬಂಧಕ್ಕೆ ಅನ್ವಯಿಸಬಾರದು ಎಂಬುದು ರಶ್ಯದ ತಗಾದೆಯಾಗಿದೆ.
ಆದರೆ ಜೆಸಿಪಿಒಎಗೆ ಸಂಬಂಧಿಸಿರದ ವಿಷಯಗಳಿಗೆ ಖಾತರಿ ನೀಡಬೇಕೆಂದು ಯಾರು ಕೂಡಾ ಒತ್ತಾಯಿಸಬಾರದು. ಹೀಗೆ ಮಾಡಿದರೆ ಒಪ್ಪಂದ ಮುರಿದುಬೀಳುವ ಅಪಾಯವಿದೆ ಎಂದು ಇ3 ಎಂದು ಕರೆಯಲಾಗುವ ಯುರೋಪ್ನ 3 ದೇಶಗಳಾದ ಫ್ರಾನ್ಸ್, ಜರ್ಮನಿ ಮತ್ತು ಬ್ರಿಟನ್ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ. ರಶ್ಯದ ಬೇಡಿಕೆಯನ್ನು ಒಪ್ಪಲಾಗದು ಎಂದು ಅಮೆರಿಕ ಈಗಾಗಲೇ ಸ್ಪಷ್ಟಪಡಿಸಿದೆ.
ಇರಾನ್ ಪರಮಾಣು ಒಪ್ಪಂದದ ಮರುಸ್ಥಾಪನೆಯ ಕುರಿತ ಮಾತುಕತೆಯ ಫಲಿತಾಂಶವನ್ನು ಅಂತರಾಷ್ಟ್ರೀಯ ತೈಲ ಮಾರುಕಟ್ಟೆ ಕುತೂಹಲದಿಂದ ನಿರೀಕ್ಷಿಸುತ್ತಿದೆ. ಮಾತುಕತೆ ಸಫಲವಾಗಿ, ಇರಾನ್ನ ಕಚ್ಛಾತೈಲ ರಫ್ತಿನ ಮೇಲಿನ ನಿಷೇಧ ತೆರವಾದರೆ, ರಶ್ಯಾದ ಕಚ್ಛಾತೈಲ ರಫ್ತಿನ ಮೇಲಿನ ನಿಷೇಧದಿಂದ ಉಂಟಾಗಿರುವ ಬಿಕ್ಕಟ್ಟಿಗೆ ಪರಿಹಾರ ದೊರಕಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News