ಬ್ಯಾಡ್ಮಿಂಟನ್; ಒಲಿಂಪಿಕ್ ಚಾಂಪಿಯನ್‍ಗೆ ಸೋಲುಣಿಸಿದ ಲಕ್ಷ್ಯ ಸೇನ್

Update: 2022-03-13 01:53 GMT
ಲಕ್ಷ್ಯ ಸೇನ್

ಜರ್ಮನಿ: ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್ ಶಿಪ್ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ ಅವರು ಒಲಿಂಪಿಕ್ ಚಿನ್ನದ ಪದಕ ವಿಜೇತ ವಿಕ್ಟರ್ ಅಕ್ಸೆಲ್ಸೆನ್ ಅವರ ವಿರುದ್ಧ ಅಚ್ಚರಿಯ ಜಯ ಸಾಧಿಸಿ ಜರ್ಮನ್ ಓಪನ್ ಸೂಪರ್ 300 ಟೂರ್ನಿಯ ಫೈನಲ್ ತಲುಪಿದ್ದಾರೆ.

ಕಳೆದ ಜನವರಿಯಲ್ಲಿ ಇಂಡಿಯಾ ಓಪನ್ ಟೂರ್ನಿಯಲ್ಲಿ ಮೊಟ್ಟಮೊದಲ ಸೂಪರ್ 500 ಪ್ರಶಸ್ತಿ ಗೆದ್ದಿದ್ದ 20 ವರ್ಷದ ಸೇನ್, ಈ ಟೂರ್ನಿಯ ಸೆಮಿಫೈನಲ್ಸ್‍ನಲ್ಲಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿ ವಿಶ್ವದ ನಂಬರ್ ವನ್ ಆಟಗಾರ ಮತ್ತು ಅಗ್ರ ಶ್ರೇಯಾಂಕದ ಅಕ್ಸೆಲ್ಸೆನ್ ಅವರನ್ನು ಒಂದು ಗಂಟೆ ಹತ್ತು ನಿಮಿಷದ ಸುಧೀರ್ಘ ಹೋರಾಟದಲ್ಲಿ 21-13, 12-21, 22-20 ಗೇಮ್‍ಗಳಿಂದ ಸೋಲಿಸಿದರು.

ವಿಶ್ವದ 12ನೇ ಕ್ರಮಾಂಕದ ಆಟಗಾರನಿಗೆ ಇದು ಸ್ಮರಣೀಯ ವಿಜಯವಾಗಿದ್ದು, ಶುಕ್ರವಾರದ ಪಂದ್ಯಕ್ಕೆ ಮುನ್ನ 4-0 ಮುಖಾಮುಖಿ ಜಯದ ದಾಖಲೆ ಹೊಂದಿದ್ದ ಆಟಗಾರನ ವಿರುದ್ಧ ಚೊಚ್ಚಲ ಜಯ ದಾಖಲಿಸಿದರು. ರವಿವಾರ ನಡೆಯುವ ಫೈನಲ್‍ನಲ್ಲಿ ಸೇನ್ ಅವರು, ಥಾಯ್ಲೆಂಡ್‍ನ ಕುನ್ಲವುತ್ ವಿಡಿಟ್‍ಸಾರ್ನ್ ಅವರನ್ನು ಎದುರಿಸಲಿದ್ದಾರೆ. ವಿಟಿಡ್‍ಸಾರ್ನ್ ಅವರು ಇನ್ನೊಂದು ಸೆಮಿಫೈನಲ್ ನಲ್ಲಿ ಮಲೇಷ್ಯಾದ ಝೀ ಜಿಯಾ ಅವರನ್ನು ಸೋಲಿಸಿದರು.

ಮೊದಲ ಗೇಮ್‍ನ 21 ನಿಮಿಷಗಳ ಹೋರಾಟದಲ್ಲಿ ಸೇನ್ ಎದುರಾಳಿ ವಿರುದ್ಧ ಅಚ್ಚರಿಯ ಮೇಲುಗೈ ಸಾಧಿಸಿದರು. ಎದುರಾಳಿಗೆ ಮುನ್ನಡೆ ಸಾಧಿಸುವ ಯಾವುದೇ ಅವಕಾಶ ನೀಡಲಿಲ್ಲ. ಮೊದಲ ಗೇಮ್‍ನಲ್ಲಿ ಒಲಿಂಪಿಕ್ ಚಾಂಪಿಯನ್, ಸೇನ್ ಅವರ ಆಟದ ಗತಿಯನ್ನು ಗುರುತಿಸುವಲ್ಲಿ ವಿಫಲರಾದರು. ಆದರೆ ಎರಡನೇ ಗೇಮ್‍ನಲ್ಲಿ ಹಿಡಿತ ಸಾಧಿಸಿದ ಅಕ್ಸೆಲ್ಸೆನ್, ಯಾವುದೇ ಪ್ರಯಾಸವಿಲ್ಲದೇ ಗೇಮ್ ಗೆದ್ದರು. ಆದರೆ ನಿರ್ಣಾಯಕ ಮೂರನೇ ಗೇಮ್‍ನಲ್ಲಿ ಆರಂಭದಿಂದಲೂ ಅದ್ಭುತ ಪ್ರದರ್ಶನ ತೋರಿದ ಸೇನ್ ಅಂತಿಮವಾಗಿ 22-20ರಿಂದ ಗೆಲ್ಲುವ ಮೂಲಕ ಇತಿಹಾಸ ಬರೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News