ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ: ಕಪಿಲ್‌ದೇವ್ ದಾಖಲೆ ಮುರಿದ ಪಂತ್

Update: 2022-03-13 14:34 GMT
Photo:twitter

 ಬೆಂಗಳೂರು, ಮಾ.13: ಶ್ರೀಲಂಕಾ ವಿರುದ್ಧದ ಹಗಲು-ರಾತ್ರಿ ಟೆಸ್ಟ್ ಪಂದ್ಯದ 2ನೇ ದಿನವಾದ ರವಿವಾರ ಕೇವಲ 28 ಎಸೆತಗಳಲ್ಲಿ 50 ರನ್ ಗಳಿಸಿದ ಭಾರತದ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 50 ರನ್ ಪೂರೈಸುವುದರೊಂದಿಗೆ 1982ರಲ್ಲಿ ಕ್ರಿಕೆಟ್ ದಂತಕತೆ ಕಪಿಲ್‌ದೇವ್ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಕಪಿಲ್‌ದೇವ್ ಕರಾಚಿಯಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ 50 ರನ್ ಗಳಿಸಿದ್ದರು.

 ಶ್ರೀಲಂಕಾ ಬೌಲರ್‌ಗಳು ಪಿಂಕ್ ಬಾಲ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾಗ ಪಂತ್ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಾಯದಿಂದ 50 ರನ್ ಸಿಡಿಸಿದ್ದು ವಿಶೇಷವಾಗಿತ್ತು. ಚಿನ್ನಸ್ವಾಮಿಸ್ಟೇಡಿಯಂನಲ್ಲಿ ಅರ್ಧಶತಕ ಪೂರೈಸಿದ ಬೆನ್ನಿಗೇ ಪಂತ್ ವಿಕೆಟ್ ಒಪ್ಪಿಸಿದರು.

   ಪಂತ್ ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ವೇಗವಾಗಿ 50 ರನ್ ಗಳಿಸಿದ ಮೂರನೇ ಆಟಗಾರನಾಗಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಭಾರತದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಅವರು 2005ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. 1981ರಲ್ಲಿ ಭಾರತ ವಿರುದ್ಧ ಇಂಗ್ಲೆಂಡ್‌ನ ಇಯಾನ್ ಬೋಥಂ 28 ಎಸೆತಗಳಲ್ಲಿ 50 ರನ್ ಗಳಿಸಿದ್ದರು.

ಟೆಸ್ಟ್‌ನಲ್ಲಿ ಅತ್ಯಂತ ವೇಗದ ಅರ್ಧಶತಕ ಸಿಡಿಸಿರುವ ದಾಖಲೆ ಪಾಕ್‌ನ ಮಾಜಿ ನಾಯಕ ಮಿಸ್ಬಾವುಲ್ ಹಕ್ ಹೆಸರಲ್ಲಿದೆ. ಅವರು 2014ರಲ್ಲಿ ಅಬುಧಾಬಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News