×
Ad

ದ್ವಿತೀಯ ಟೆಸ್ಟ್: ಶ್ರೀಲಂಕಾದ ಗೆಲುವಿಗೆ 447 ರನ್ ಸವಾಲು

Update: 2022-03-13 21:27 IST

  ಬೆಂಗಳೂರು, ಮಾ.13: ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಸತತ ಎರಡನೇ ಅರ್ಧಶತಕ(67 ರನ್)ಹಾಗೂ ರಿಷಭ್ ಪಂತ್ ವೇಗದ 50 ರನ್ ನೆರವಿನಿಂದ ಭಾರತ ತಂಡ ಶ್ರೀಲಂಕಾ ತಂಡಕ್ಕೆ ದ್ವಿತೀಯ ಟೆಸ್ಟ್ ಪಂದ್ಯದ ಗೆಲುವಿಗೆ 447 ರನ್ ಕಠಿಣ ಗುರಿ ನೀಡಿದೆ.

2ನೇ ದಿನದಾಟವಾದ ರವಿವಾರ ಜಸ್‌ಪ್ರೀತ್ ಬುಮ್ರಾ 5 ವಿಕೆಟ್ ಗೊಂಚಲು (5-24)ನೆರವಿನಿಂದ ಶ್ರೀಲಂಕಾವನ್ನು ಮೊದಲ ಇನಿಂಗ್ಸ್‌ನಲ್ಲಿ 109 ರನ್‌ಗೆ ನಿಯಂತ್ರಿಸಿದ ಭಾರತ 143 ರನ್ ಇನಿಂಗ್ಸ್ ಮುನ್ನಡೆ ಪಡೆಯಿತು. ಆನಂತರ 2ನೇ ಇನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 303 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಒಟ್ಟು 446 ರನ್ ಮುನ್ನಡೆ ಪಡೆಯಿತು.

ನಾಯಕ ರೋಹಿತ್ ಶರ್ಮಾ(46 ರನ್)ಹಾಗೂ ಮಯಾಂಕ್ ಅಗರ್ವಾಲ್(22 ರನ್)ಮೊದಲ ವಿಕೆಟ್‌ಗೆ 42 ರನ್ ಜೊತೆಯಾಟ ನಡೆಸಿದರು. ಹನುಮ ವಿಹಾರಿ(35) ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ(13) ದೊಡ್ಡ ಸ್ಕೋರ್ ಗಳಿಸಲು ವಿಫಲರಾದರು. ಈ ನಡುವೆ 28 ಎಸೆತಗಳಲ್ಲಿ 50 ರನ್ ಪೂರೈಸಿದ ಪಂತ್ ಮಾಜಿ ನಾಯಕ ಕಪಿಲ್‌ದೇವ್ ಹೆಸರಲ್ಲಿದ್ದ 40 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು.

ಪಂತ್ ಹೊರತುಪಡಿಸಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ದೊಡ್ಡ ಸ್ಕೋರ್ ಗಳಿಸಲು ವಿಫಲರಾದಾಗ ಮತ್ತೊಮ್ಮೆ ತಂಡಕ್ಕೆ ಆಸರೆಯಾದ ಶ್ರೇಯಸ್ ಅಯ್ಯರ್ 67 ರನ್(87 ಎಸೆತ, 9 ಬೌಂಡರಿ)ಗಳಿಸಿದರು. ಈ ಮೂಲಕ ತಂಡದ ಮುನ್ನಡೆಯನ್ನು 400ರ ಗಡಿ ದಾಟಿಸಿದರು. ಶ್ರೀಲಂಕಾದ ಪರ ಸ್ಪಿನ್ನರ್‌ಗಳಾದ ಪ್ರವೀಣ್ ಜಯವಿಕ್ರಮ(4-78) ಹಾಗೂ ಲಸಿತ್ ಎಂಬುಲ್ಡೇನಿಯ(3-87)7 ವಿಕೆಟ್‌ಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News