"ಸೇನಾ ಕಾರ್ಯಾಚರಣೆಯಲ್ಲಿ ನಾವು ನಿರೀಕ್ಷಿಸಿದಷ್ಟು ತ್ವರಿತ ಮುನ್ನಡೆ ಸಾಧ್ಯವಾಗುತ್ತಿಲ್ಲ"

Update: 2022-03-14 15:01 GMT
Vladimir Putin | photo courtesy:twitter

 ಮಾಸ್ಕೊ, ಮಾ.14: ಉಕ್ರೇನ್‌ನಲ್ಲಿ ರಶ್ಯ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ತಾವು ನಿರೀಕ್ಷಿಸಿದಷ್ಟು ತ್ವರಿತ ಮುನ್ನಡೆ ಸಾಧ್ಯವಾಗುತ್ತಿಲ್ಲ . ಯೋಜಿಸಿದ ರೀತಿಯಲ್ಲಿ ಕೆಲಸ ಮುಂದುವರಿಯುತ್ತಿಲ್ಲ ಎಂದು ರಶ್ಯ ಅಧ್ಯಕ್ಷ ಪುಟಿನ್ ಅವರ ನಿಕಟ ಮಿತ್ರ, ರಾಷ್ಟ್ರೀಯ ಭದ್ರತಾ ದಳದ ಮುಖ್ಯಸ್ಥ ವಿಕ್ಟರ್ ಝೊಲೊಟೊವ್ ಹೇಳಿದ್ದಾರೆ.

   ಉಕ್ರೇನ್‌ನಲ್ಲಿ ಕಟ್ಟಾ ಬಲಪಂಥೀಯ ಸೇನೆಯು ಪ್ರಜೆಗಳ ಹಿಂದೆ ನಿಂತು ಅವರನ್ನು ಪ್ರಚೋದಿಸುತ್ತಿರುವುದು ತಾವು ನಿರೀಕ್ಷಿಸಿದ್ದ ವೇಗದಲ್ಲಿ ಮುನ್ನಡೆ ಸಾಧ್ಯವಾಗದಿರಲು ಮುಖ್ಯ ಕಾರಣವಾಗಿದೆ ಎಂದು ಝೊಲೊಟೊವ್ ಹೇಳಿದ್ದಾರೆ. ಇದೇ ಆರೋಪವನ್ನು ರಶ್ಯ ಸೇನೆಯ ಅಧಿಕಾರಿಗಳೂ ಮಾಡಿದ್ದರು. ಆದರೆ , ಶುಕ್ರವಾರ ಉಕ್ರೇನ್‌ನಲ್ಲಿನ ಇತ್ತೀಚಿನ ಬೆಳವಣಿಗೆ ಬಗ್ಗೆ ಪುಟಿನ್‌ಗೆ ಮಾಹಿತಿ ನೀಡಿದ್ದ ರಕ್ಷಣಾ ಸಚಿವ ಸೆರ್ಗೈ ಶೊಯಿಗು, ಎಲ್ಲವೂ ಯೋಜಿಸಿದ ರೀತಿಯಲ್ಲಿಯೇ ನಡೆಯುತ್ತಿದೆ ಎಂದಿದ್ದರು.

 ನಾವು ನಿರೀಕ್ಷಿಸಿದ ರೀತಿಯಲ್ಲಿ ಮುನ್ನಡೆ ಸಾಧ್ಯವಾಗದಿದ್ದರೂ, ಹಂತ ಹಂತವಾಗಿ ನಮ್ಮ ಗುರಿಯನ್ನು ಖಂಡಿತಾ ತಲುಪಲಿದ್ದೇವೆ. ಗೆಲುವು ನಮ್ಮದಾಗಲಿದೆ ಎಂದು ಝೊಲೊಟೊವ್ ರಶ್ಯ ರಾಷ್ಟ್ರೀಯ ಭದ್ರತಾ ದಳದ ವೆಬ್‌ಸೈಟ್‌ನಲ್ಲಿ ಸಂದೇಶ ಪೋಸ್ಟ್‌ಮಾಡಿದ್ದಾರೆ. ಝೊಲೊಟೊವ್ ಈ ಹಿಂದೆ ಪುಟಿನ್ ಅವರ ಭದ್ರತಾ ಪಡೆಯ ಮುಖ್ಯಸ್ಥರಾಗಿದ್ದು ಪುಟಿನ್ ಅವರ ನಿಕಟ ಮಿತ್ರರಾಗಿದ್ದಾರೆ. ರಾಷ್ಟ್ರೀಯ ಭದ್ರತಾ ದಳವು ಆಂತರಿಕ ಸೇನಾ ಘಟಕವಾಗಿದ್ದು ಇದರ ಮೇಲೆ ಪುಟಿನ್ ನೇರ ನಿಯಂತ್ರಣ ಹೊಂದಿದ್ದಾರೆ. ರಾಷ್ಟ್ರೀಯ ಭದ್ರತಾ ದಳದ ತುಕಡಿಗಳನ್ನು ಪುಟಿನ್ ಉಕ್ರೇನ್‌ನಲ್ಲಿ ನಿಯೋಜಿಸಿದ್ದಾರೆ.

ಉಕ್ರೇನ್ ಮೇಲಿನ ಪುಟಿನ್ ಆಕ್ರಮಣ ಸಾಮ್ರಾಜ್ಯಶಾಹಿ ಶೈಲಿಯದ್ದಾಗಿದ್ದು ಅತ್ಯಂತ ಕೆಟ್ಟದಾಗಿ ಯೋಜಿತವಾಗಿದೆ. ಉಕ್ರೇನಿಯನ್ನರ ಪ್ರತಿರೋಧ ಮತ್ತು ರಶ್ಯವನ್ನು ಶಿಕ್ಷಿಸುವ ಪಾಶ್ಚಿಮಾತ್ಯ ದೇಶಗಳ ದೃಢನಿರ್ಧಾರವನ್ನು ಪುಟಿನ್ ಕೀಳಂದಾಜಿಸಿದ್ದರು ಎಂದು ಅಮೆರಿಕ ಹಾಗೂ ಅದರ ಯುರೋಪಿಯನ್ ಮಿತ್ರದೇಶಗಳು ಟೀಕಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News