ರಶ್ಯದಲ್ಲಿ ಇನ್‌ಸ್ಟಾಗ್ರಾಮ್ ಸೇವೆ ಅಲಭ್ಯ : ವರದಿ

Update: 2022-03-14 15:11 GMT

ಮಾಸ್ಕೊ, ಮಾ.14: ಮೆಟಾ(ಈ ಹಿಂದಿನ ಫೇಸ್‌ಬುಕ್) ಸಾಮಾಜಿಕ ಮಾಧ್ಯಮದಲ್ಲಿ ರಶ್ಯನ್ನರ ಮತ್ತು ರಶ್ಯ ಸೇನೆಯ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡುವ ಹೇಳಿಕೆ ಪ್ರಸಾರವಾಗಿದೆ ಎಂದು ರಶ್ಯ ಆರೋಪಿಸಿದ ಬೆನ್ನಲ್ಲೇ, ಮೆಟಾದ ಸಹಸಂಸ್ಥೆ ಇನ್‌ಸ್ಟಾಗ್ರಾಮ್ ಸೇವೆ ರಶ್ಯದಲ್ಲಿ ಬಳಕೆಗೆ ಲಭಿಸುತ್ತಿಲ್ಲ ಎಂದು ಎಎಫ್‌ಪಿ ವರದಿ ಮಾಡಿದೆ.

 ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದೊಡನೆ ಇದರ ಬಗ್ಗೆ ರಶ್ಯನ್ನರಿಗೆ ಮಾಹಿತಿ ಲಭಿಸುವುದನ್ನು ನಿಯಂತ್ರಿಸುವ ಉದ್ದೇಶದಿಂದ ಮಾರ್ಚ್ ಆರಂಭದಲ್ಲಿ ಫೇಸ್‌ಬುಕ್ ಹಾಗೂ ಟ್ವಿಟರ್ ಸೇವೆಯನ್ನು ರಶ್ಯ ಸ್ಥಗಿತಗೊಳಿಸಿತ್ತು. ರಶ್ಯದ ಮಾಧ್ಯಮ ನಿಯಂತ್ರಣ ಸಂಸ್ಥೆ ರೊಸ್ಕೊಮ್ನಾಡ್ಜರ್ ಸೋಮವಾರ ಪ್ರಕಟಿಸಿರುವ ನಿರ್ಬಂಧಿತ ಆನ್‌ಲೈನ್ ವೇದಿಕೆಗಳ ಪಟ್ಟಿಯಲ್ಲಿ ಇನ್‌ಸ್ಟಾಗ್ರಾಮ್ ಕಾಣಿಸಿಕೊಂಡಿತ್ತು.

  ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ವೇದಿಕೆ ರಶ್ಯದಲ್ಲಿ ಅತ್ಯಂತ ಜನಪ್ರಿಯ ಆನ್‌ಲೈನ್ ಮಾಧ್ಯಮಗಳಾಗಿವೆ. ಸಣ್ಣ ವ್ಯಾಪಾರಸ್ತರಿಗೆ, ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳ ಜಾಹೀರಾತು, ಮಾರಾಟ, ಗ್ರಾಹಕರೊಂದಿಗೆ ಸಂವಾದಕ್ಕೆ ಇನ್‌ಸ್ಟಾಗ್ರಾಮ್ ನೆಚ್ಚಿನ ಮಾಧ್ಯಮವಾಗಿತ್ತು. ವಿಪಿಎನ್ (ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್) ವ್ಯವಸ್ಥೆಯಿಲ್ಲದೆ ಇನ್‌ಸ್ಟಾಗ್ರಾಮ್ ಆ್ಯಪ್ ರಿಫ್ರೆಶ್ ಆಗುತ್ತಿಲ್ಲ ಎಂದು ಎಎಫ್‌ಪಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News