ಕಾಮನ್ ವೆಲ್ತ್ ಗೇಮ್ಸ್, ಏಶ್ಯಾಡ್‌ಗೆ ಸಜ್ಜಾಗಲು ಅಮೆರಿಕದಲ್ಲಿ ವೇಟ್‌ಲಿಫ್ಟರ್ ಚಾನು ತರಬೇತಿ
ಹೊಸದಿಲ್ಲಿ: ಅಮೆರಿಕದಲ್ಲಿ ಈ ವಾರ ಸುದೀರ್ಘ ತರಬೇತಿಯನ್ನು ಆರಂಭಿಸುವ ಮೂಲಕ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತೆ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಈ ವರ್ಷ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಶ್ಯಾಡ್‌ಗೆ ತಯಾರಿ ನಡೆಸಲಿದ್ದಾರೆ.
ಕನಿಷ್ಠ ಒಂದು ತಿಂಗಳ ಕಾಲ ಅಮೆರಿಕದಲ್ಲಿ ಉಳಿದುಕೊಳ್ಳಲು 27ರ ಹರೆಯದ ಚಾನು ಹಾಗೂ ಭಾರತದ ವೇಟ್‌ಲಿಫ್ಟಿಂಗ್‌ನ ಮುಖ್ಯ ಕೋಚ್ ವಿಜಯ್ ಶರ್ಮಾ ಅವರು ಗುರುವಾರ ರಾತ್ರಿ ಅಮೆರಿಕದ ಸೈಂಟ್ ಲೂಯಿಸ್‌ಗೆ ಪ್ರಯಾಣಿಸಿದ್ದಾರೆ.
‘‘ನಾವು 4-5 ವಾರಗಳ ಕಾಲ ಅಮೆರಿಕದಲ್ಲಿ ಉಳಿದುಕೊಳ್ಳಲು ಯೋಜಿಸಿದ್ದು, ಅಲ್ಲಿ ತರಬೇತಿ ಹೇಗೆ ನಡೆಯುತ್ತದೆ ಎನ್ನುವುದನ್ನು ನಾವು ನೋಡುತ್ತೇವೆ. ಎಪ್ರಿಲ್ ಕೊನೆಯ ವಾರದ ತನಕ ಅಲ್ಲಿಯೇ ಇರುವ ಯೋಜನೆ ಇದೆ. ತಿಂಗಳ ಬಳಿಕ ನಮ್ಮ ಪ್ರಗತಿಯನ್ನು ಪರಿಶೀಲಿಸುತ್ತೇವೆ. ಅಲ್ಲಿಯೇ ಇರಬೇಕೋ, ಬೇಡವೋ ಎಂದು ನಿರ್ಧರಿಸುತ್ತೇವೆ’’ ಎಂದು ಶರ್ಮಾ ಹೇಳಿದ್ದಾರೆ.
ಚಾನು ಅವರಲ್ಲದೆ ಇನ್ನೂ ಐವರು ಲಿಫ್ಟರ್‌ಗಳಾದ-ಜೆರೆಮಿ ಲಾಲ್‌ರಿನ್ನುಂಗ, ಅಚಿಂತ ಶೆವುಲಿ, ಸಂಕೇತ್ ಸಾಗರ್, ಬಿಂದ್ಯಾರಾಣಿ ದೇವಿ ಹಾಗೂ ಜಿಲಿ ದಾಲಾಬೆಹೆರಾ ತರಬೇತಿಗಾಗಿ ಅಮೆರಿಕಕ್ಕೆ ಪ್ರಯಾಣಿಸಲು ಬಯಸಿದ್ದು, ತಮ್ಮ ವೀಸಾಕ್ಕಾಗಿ ಕಾಯುತ್ತಿದ್ದಾರೆ.
‘‘ಎಲ್ಲವೂ ಸಿದ್ಧವಾಗಿದೆ. ನಾವು ವೀಸಾಗಳಿಗಾಗಿ ಕಾಯುತ್ತಿದ್ದೇವೆ. ಸಾಯ್ ಎಲ್ಲವನ್ನೂ ನೀಡಿದೆ. ಲಿಫ್ಟರ್‌ಗಳಿಗೆ ವೀಸಾ ಸಿಗಲು ನೆರವಾಗುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಕ್ರೀಡಾ ಕಾರ್ಯದರ್ಶಿಗಳಿಗೆ ವಿನಂತಿಸಿದ್ದೇವೆ’’ ಎಂದು ಶರ್ಮಾ ಹೇಳಿದ್ದಾರೆ.
ಕಳೆದ ತಿಂಗಳು ನಡೆದ ಸಿಂಗಾಪುರ ವೇಟ್‌ಲಿಫ್ಟಿಂಗ್ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ಮಾಜಿ ವಿಶ್ವ ಚಾಂಪಿಯನ್ ಚಾನು ಜುಲೈ 28ರಿಂದ ಆಗಸ್ಟ್ 8ರ ತನಕ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಗೆ 49 ಕೆಜಿ ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ. ಚಾನು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಎರಡು ಬಾರಿ ಪದಕವನ್ನು ಜಯಿಸಿದ್ದಾರೆ. 2014ರ ಗ್ಲಾಸ್ಗೋ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಚಾನು 4 ವರ್ಷಗಳ ಬಳಿಕ 2018ರ ಗೋಲ್ಡ್‌ಕೋಸ್ಟ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಕಾಮನ್‌ವೆಲ್ತ್ ಗೇಮ್ಸ್ ಮುಕ್ತಾಯಗೊಂಡ ಒಂದು ತಿಂಗಳ ಬಳಿಕ ಏಶ್ಯನ್ ಗೇಮ್ಸ್ ನಿಗದಿಯಾಗಿದ್ದು, ಚಾನು ಗೇಮ್ಸ್‌ನಲ್ಲಿ 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕೋ ಅಥವಾ 55 ಕೆಜಿ ವಿಭಾಗದಲ್ಲಿ ಮುಂದುವರಿಯಬೇಕೋ ಎಂಬ ಕುರಿತು ಇನ್ನೂ ನಿರ್ಧರಿಸಿಲ್ಲ.