‘ಅಮೆರಿಕದ ಇಂಡೊ ಪೆಸಿಫಿಕ್ ನೀತಿ’ ಅಪಾಯಕಾರಿ: ಚೀನಾ

Update: 2022-03-20 16:37 GMT
photo courtesy:twitter

ಬೀಜಿಂಗ್, ಮಾ.20: ಅಮೆರಿಕದ ಇಂಡೊ-ಪೆಸಿಫಿಕ್ ಕಾರ್ಯನೀತಿಯು ನೇಟೊ ಸಂಘಟನೆಯ ಪೂರ್ವದತ್ತ ವಿಸ್ತರಣೆಯಷ್ಟೇ ಅಪಾಯಕಾರಿಯಾಗಿದೆ. ಉಕ್ರೇನ್ ವಿರುದ್ಧದ ರಶ್ಯಾದ ಮಿಲಿಟರಿ ಕಾರ್ಯಾಚರಣೆಗೆ ನೇಟೊ ಸಂಘಟನೆ ಪೂರ್ವದತ್ತ ವಿಸ್ತರಿಸಿರುವುದು ಕಾರಣ ಎಂಬುದನ್ನು ಮರೆಯಬಾರದು ಎಂದು ಚೀನಾ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ಲಿ ಯುಚೆಂಗ್ ಹೇಳಿದ್ದಾರೆ.


ಸೋವಿಯತ್ ಒಕ್ಕೂಟದ ವಿಭಜನೆಗೆ ಸಂಬಂಧಿಸಿದ ವಾರ್ಸಾ ಒಪ್ಪಂದದ ಇತಿಹಾಸವನ್ನೂ ನೇಟೊ ಪರಿಗಣಿಸಬೇಕಿದೆ ಎಂದವರು ಹೇಳಿದ್ದಾರೆ. ತ್ಸಿಂಘ್ವಾ ವಿವಿಯ ಅಂತರಾಷ್ಟ್ರೀಯ ಭದ್ರತೆ ಮತ್ತು ಕಾರ್ಯನೀತಿ ಕೇಂದ್ರ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆದರೆ ನೇಟೊ ತನ್ನನ್ನು ಬಲಪಡಿಸಿಕೊಳ್ಳುವ ಮತ್ತು ವಿಸ್ತರಣೆಯ ನಿಟ್ಟಿನತ್ತ ಆದ್ಯತೆ ನೀಡಿತು. ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡ ಪರಿಣಾಮವನ್ನು ಯಾರೂ ಕೂಡಾ ಚೆನ್ನಾಗಿ ಊಹಿಸಬಹುದಾಗಿದೆ ಮತ್ತು ಪರಿಣಾಮ ಈಗ ಉಕ್ರೇನ್ ಸಂಘರ್ಷದ ರೂಪದಲ್ಲಿ ನಮ್ಮ ಕಣ್ಣೆದುರು ನಿಂತಿದೆ ಎಂದವರು ಹೇಳಿದ್ದಾರೆ.
 
ಉಕ್ರೇನ್ ಅನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ನೇಟೊದ ಯೋಜನೆ ರಶ್ಯದ ಆಂತರಿಕ ಭದ್ರತೆಗೆ ಸವಾಲಾಗಿ ಪರಿಣಮಿಸಿತು ಮತ್ತು ಇದರಿಂದಾಗಿ ಉಕ್ರೇನ್ ವಿರುದ್ಧದ ಮಿಲಿಟಟಿ ಕಾರ್ಯಾಚರಣೆಗೆ ಅಧ್ಯಕ್ಷ ಪುಟಿನ್ ಆದೇಶಿಸಿದರು. ಇದೀಗ ಸಂಧಾನ ಮಾತುಕತೆಯ ಮೂಲಕ ಬಿಕ್ಕಟ್ಟು ಪರಿಹರಿಸಲು ಎಲ್ಲಾ ದೇಶಗಳೂ ರಶ್ಯ-ಉಕ್ರೇನ್ ಗೆ ನೆರವಾಗಬೇಕಿದೆ ಎಂದವರು ಹೇಳಿದರು. 

ವಾರ್ಸಾ ಒಪ್ಪಂದವನ್ನು ನೇಟೊ ಉಲ್ಲಂಘಿಸಬಾರದಿತ್ತು ಮತ್ತು ಪೂರ್ವದತ್ತ ವಿಸ್ತರಣೆಗೆ ಮುಂದಾಗಬಾರದಿತ್ತು. ಸಂಪೂರ್ಣ ಭದ್ರತೆಯ ಅನ್ವೇಷಣೆಯು ವಾಸ್ತವವಾಗಿ ಸಂಪೂರ್ಣ ಅಭದ್ರತೆಗೆ ಕಾರಣವಾಗುತ್ತದೆ ಎಂದ ಅವರು, ಪ್ರವೃತ್ತಿಗೆ ವಿರುದ್ಧವಾಗಿ ಇಂಡೊ-ಪೆಸಿಫಿಕ್ ಕಾರ್ಯನೀತಿಯನ್ನು ಅನುಸರಿಸುವುದು ಸಮಸ್ಯೆಯನ್ನು ಪ್ರಚೋದಿಸುತ್ತದೆ. ಮುಚ್ಚಿದ ವಿಶೇಷ ವಲಯ ಅಥವಾ ಸಣ್ಣ ಗುಂಪುಗಳನ್ನು ಒಟ್ಟುಗೂಡಿಸಿ, ಈ ವಲಯವನ್ನು ವಿಘಟನೆ ಮತ್ತು ಬಣ ಆಧರಿಸಿ ವಿಭಜನೆಗೊಳಿಸುವುದು ಪೂರ್ವದತ್ತ ನೇಟೊದ ವಿಸ್ತರಣೆಯಷ್ಟೇ ಅಪಾಯಕಾರಿಯಾಗಿದೆ ಎಂದರು.

ಈ ಬಗ್ಗೆ ಗಮನನೀಡದೆ ಸುಮ್ಮನಿದ್ದರೆ, ಊಹಿಸಲೂ ಸಾಧ್ಯವಾಗದ ಪರಿಣಾಮಕ್ಕೆ ಕಾರಣವಾಗಲಿದೆ ಮತ್ತು ಅಂತಿಮವಾಗಿ ಏಶಿಯಾ ಪೆಸಿಫಿಕ್ ವಲಯವನ್ನು ಪ್ರಪಾತದ ಅಂಚಿನೆಡೆಗೆ ತಳ್ಳಲಿದೆ ಎಂದವರು ಎಚ್ಚರಿಕೆ ನೀಡಿದ್ದಾರೆ. ಏಶ್ಯಾದಲ್ಲಿರುವ ನಾವು ನಮ್ಮ ಭವಿಷ್ಯವನ್ನು ನಮ್ಮ ಕೈಯಲ್ಲೇ ಭದ್ರವಾಗಿರಿಸಿಕೊಳ್ಳಬೇಕಿದೆ. ಸ್ವತಂತ್ರ, ಸಮತೋಲಿತ ಮತ್ತು ವಿವೇಕಯುತ ವಿದೇಶಿ ನೀತಿಯನ್ನು ಅನುಸರಿಸಿ ಏಶ್ಯಾ ಪೆಸಿಫಿಕ್ ವಲಯದ ಏಕೀಕರಣದ ಪ್ರಕ್ರಿಯೆಗೆ ಬಲ ನೀಡಬೇಕು ಎಂದವರು ಹೇಳಿರುವುದಾಗಿ ಚೀನಾ ವಿದೇಶ ವ್ಯವಹಾರ ಇಲಾಖೆಯ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News