ಶ್ರೀಲಂಕಾ: ಸೀಮೆ ಎಣ್ಣೆಗೆ ಕ್ಯೂ ನಿಂತಿದ್ದ ಇಬ್ಬರು ಕುಸಿದು ಬಿದ್ದು ಸಾವು‌

Update: 2022-03-20 17:34 GMT
photo courtesy:twitter/@AlArabiya_Eng

ಕೊಲಂಬೊ, ಮಾ.20: ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಇಂಧನ, ಆಹಾರಕ್ಕೂ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ರವಿವಾರ ಕೊಲಂಬೊದಲ್ಲಿ ಸೀಮೆಎಣ್ಣೆ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಇಬ್ಬರು ವ್ಯಕ್ತಿಗಳು ಕುಸಿದು ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.

ಅಗತ್ಯವಸ್ತುಗಳ ಹಾಗೂ ದೈನಂದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಹಣದುಬ್ಬರದ ಸಮಸ್ಯೆ ಉಲ್ಬಣಿಸಿದೆ. ಅನಿಯಮಿತ ವಿದ್ಯುತ್ ಕಡಿತದಿಂದಾಗಿ ಸೀಮೆಎಣ್ಣೆಗೆ ಬೇಡಿಕೆ ಹೆಚ್ಚಿದೆ. ಆದರೆ ಬೇಡಿಕೆಯಷ್ಟು ಪೂರೈಕೆ ಸಾಧ್ಯವಾಗದೆ ಸೀಮೆ ಎಣ್ಣೆಯ ಕೊರತೆ ಎದುರಾಗಿದೆ. ಸೀಮೆಎಣ್ಣೆಗಾಗಿ ದಿನವಿಡೀ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮೃತಪಟ್ಟವರಿಬ್ಬರೂ 70 ವರ್ಷ ಮೀರಿದವರು. ಗಂಟೆಗಟ್ಟಲೆ ಬಿಸಿಲಲ್ಲಿ ಕ್ಯೂ ನಿಂತಿದ್ದರಿಂದ ಅಸ್ವಸ್ಥಗೊಂಡು ಕುಸಿದು ಬಿದ್ದು ಕೊನೆಯುಸಿರೆಳೆದರು ಎಂದು ಪೊಲೀಸ್ ಇಲಾಖೆಯ ವಕ್ತಾರರು ಹೇಳಿದ್ದಾರೆ. ಕಚ್ಛಾತೈಲದ ದಾಸ್ತಾನು ಮುಗಿದ ಕಾರಣ ದೇಶದ ಏಕೈಕ ತೈಲ ಸಂಸ್ಕರಣಾ ಘಟಕವನ್ನು ರವಿವಾರ ಮುಚ್ಚಲಾಗಿದೆ ಎಂದು ಶ್ರೀಲಂಕಾದ ಪೆಟ್ರೋಲಿಯಂ ಜನರಲ್ ಎಂಪ್ಲಾಯೀಸ್ ಯೂನಿಯನ್‌ನ ಅಧ್ಯಕ್ಷ ಅಶೋಕ ರಣವಾಲಾ ಹೇಳಿದ್ದಾರೆ.
ದೇಶದಲ್ಲಿ ಅಡುಗೆ ಅನಿಲ ದರ ಗಗನಕ್ಕೇರಿದ್ದರಿಂದ ಬಡ ಮತ್ತು ಮಧ್ಯಮ ವರ್ಗದ ಜನತೆ ಅಡುಗೆ ತಯಾರಿಸಲು ಸೀಮೆ ಎಣ್ಣೆಗೆ ಮೊರೆಹೋಗಿದ್ದಾರೆ. ರವಿವಾರ ಶ್ರೀಲಂಕಾದಲ್ಲಿ ಅಡುಗೆ ಅನಿಲದ 12.5 ಕಿ.ಗ್ರಾಂ ತೂಕದ ಸಿಲಿಂಡರ್ ದರ 1,359 ರೂ.ಗೆ ಏರಿಕೆಯಾಗಿದೆ ಎಂದು ಗ್ಯಾಸ್ ಸಂಸ್ಥೆಗಳ ಹೇಳಿಕೆ ತಿಳಿಸಿದೆ.
 ಶ್ರೀಲಂಕಾದ ವಿದೇಶಿ ವಿನಿಮಯ ದಾಸ್ತಾನು ಫೆಬ್ರವರಿಯಲ್ಲಿ 2.31 ಬಿಲಿಯನ್ ಡಾಲರ್ಗೆ ಕುಸಿದಿದ್ದು ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಸಂದರ್ಭ ಡಾಲರ್ ಮೂಲಕ ಪಾವತಿಸಲು ಸಾಧ್ಯವಾಗದೆ ದೇಶದಲ್ಲಿ ದೈನಂದಿನ ಬಳಕೆಯ ವಸ್ತುಗಳ ತೀವ್ರ ಕೊರತೆ ಎದುರಾಗಿದೆ. ಫೆಬ್ರವರಿಯಲ್ಲಿ ಶ್ರೀಲಂಕಾದ ಹಣದುಬ್ಬರ 15.1% ದಾಖಲೆ ಮಟ್ಟ ತಲುಪಿದ್ದು ಏಶ್ಯಾ ದೇಶಗಳಲ್ಲೇ ಇದು ಅತ್ಯಧಿಕ ಪ್ರಮಾಣವಾಗಿದೆ. ಆಹಾರ ಹಣದುಬ್ಬರ ಪ್ರಮಾಣ 25.7%ಕ್ಕೆ ತಲುಪಿದೆ ಎಂದು ವರದಿಯಾಗಿದೆ.

1 ಕಪ್ ಚಹಾ ಬೆಲೆ 100 ರೂ.
 
ಕಳೆದ 50 ವರ್ಷಗಳಲ್ಲೇ ಅತ್ಯಂತ ಗಂಭೀರ ಪ್ರಮಾಣದ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಅಗತ್ಯದ ವಸ್ತುಗಳ ಬೆಲೆ ಗಗನ ಮುಖಿಯಾಗಿದೆ. ಹಾಲಿನ ಪುಡಿಯ 400 ಗ್ರಾಂ. ಪೊಟ್ಟಣದ ಬೆಲೆ ರವಿವಾರ 250 ರೂ.ಗೆ ತಲುಪಿದ್ದು ಕಾಫಿ, ಚಹಾದ ಬೆಲೆಯೂ ವಿಪರೀತ ಹೆಚ್ಚಿದೆ. ಹೋಟೆಲ್‌ಗಳಲ್ಲಿ ಒಂದು ಕಪ್ ಚಹಾದ ಬೆಲೆ 100 ರೂಪಾಯಿಗೆ ತಲುಪಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News