ಉಕ್ರೇನ್ ನಲ್ಲಿ ಮತ್ತೆ ಸೂಪರ್ ಸಾನಿಕ್ ಕ್ಷಿಪಣಿ ಪ್ರಯೋಗಿಸಿದ ರಶ್ಯ

Update: 2022-03-20 18:28 GMT
photo courtesy:twitter

ಕೀವ್, ಮಾ.20: ಉಕ್ರೇನ್ ಮೇಲೆ ರವಿವಾರ ಮತ್ತೊಮ್ಮೆ ಅತ್ಯಾಧುನಿಕ ಕಿಂಝಾಲ್ ಸೂಪರ್ಸಾನಿಕ್ ಕ್ಷಿಪಣಿ ಪ್ರಯೋಗಿಸಿರುವುದಾಗಿ ರಶ್ಯ ಹೇಳಿದೆ. ಮಿಕೊಲೈವ್ ಪ್ರಾಂತದ ಕೊಸ್ಟ್ಯಾಂಟಿನಿವ್ಕ ನಗರದಲ್ಲಿ ಉಕ್ರೇನ್ ಶಸಸ್ತ್ರ ಪಡೆಗಳ ಉಪಯೋಗಿಸುತ್ತಿದ್ದ ತೈಲ ಮತ್ತು ಲ್ಯೂಬ್ರಿಕೆಂಟ್ಸ್ ಸಂಗ್ರಹಾಗಾರ ಕ್ಷಿಪಣಿಯಿಂದ ನಾಶವಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.

ಈ ತೈಲ ಸಂಗ್ರಹಾಗಾರದಿಂದ ದಕ್ಷಿಣದಲ್ಲಿ ಕಾರ್ಯಾಚರಿಸುತ್ತಿದ್ದ ಸೇನಾಪಡೆಯ ವಾಹನಗಳಿಗೆ ತೈಲ ಪೂರೈಕೆಯಾಗುತ್ತಿತ್ತು. ರಶ್ಯದ ನಿಯಂತ್ರಣದಲ್ಲಿರುವ ಕ್ರಿಮಿಯಾ ಪ್ರಾಂತದಿಂದ ಕಿಂಝಾಲ್ ಸೂಪರ್ಸಾನಿಕ್ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂದು ಇಲಾಖೆ ಹೇಳಿದೆ.

ಅಲ್ಲದೆ, ಉತ್ತರ ಉಕ್ರೇನ್‌ನ ಒವ್ರಚ್ ನಗರದಲ್ಲಿನ ತರಬೇತಿ ಕೇಂದ್ರವನ್ನು ಗುರಿಯಾಗಿಸಿ ಕ್ಯಾಸ್ಪಿಯನ್ ಸಮುದ್ರದ ಮೂಲಕ ಪ್ರಯೋಗಿಸಿದ ಕ್ಯಾಲಿಬರ್ ಕ್ರೂಸ್ ಕ್ಷಿಪಣಿಯ ದಾಳಿಯಲ್ಲಿ ಉಕ್ರೇನ್‌ನ ವಿಶೇಷ ಕಾರ್ಯಪಡೆಯ 100ಕ್ಕೂ ಅಧಿಕ ಯೋಧರು ಹಾಗೂ ವಿದೇಶದ ಬಾಡಿಗೆ ಸಿಪಾಯಿಗಳನ್ನು ಹತ್ಯೆ ಮಾಡಲಾಗಿದೆ ಎಂದು ರಶ್ಯದ ವಿದೇಶ ವ್ಯವಹಾರ ಇಲಾಖೆ ಹೇಳಿದೆ. ಅಲ್ಲದೆ ಶನಿವಾರ ಮತ್ತು ರವಿವಾರ ಉಕ್ರೇನ್‌ನ ಇತರ ವ್ಯವಸ್ಥೆಗಳನ್ನು ಗುರಿಯಾಗಿಸಿ ದೀರ್ಘ ಶ್ರೇಣಿಯ ಪ್ರಿಸಿಷನ್ ಕ್ಷಿಪಣಿಗಳನ್ನು ಬಳಸಲಾಗಿದೆ ಎಂದು ರಶ್ಯದ ಸೇನೆ ಹೇಳಿದೆ.
 
ಉಕ್ರೇನ್‌ನ ಪಶ್ಚಿಮದ ಇವಾನೊ-ಫ್ರಾಂಕಿವ್ಸ್ಕ್ ಪ್ರಾಂತದ ಡೆಲಿಯಟಿನ್ ಗ್ರಾಮದಲ್ಲಿ ಕ್ಷಿಪಣಿ ಹಾಗೂ ವಾಯುದಾಳಿಯಲ್ಲಿ ಬಳಸುವ ಮದ್ದುಗುಂಡುಗಳನ್ನು ಶೇಖರಿಸಿಟ್ಟಿದ್ದ ಭೂಗತ ಗೋದಾಮಿನ ಮೇಲೆ ಕಿಂಝಾಲ್ ಹೈಪರ್ಸಾನಿಕ್ ಏರೊಬಲಿಸ್ಟಿಕ್ ಕ್ಷಿಪಣಿ ಪ್ರಯೋಗಿಸಿ ಅದನ್ನು ಧ್ವಂಸಗೊಳಿಸಲಾಗಿದೆ. ಉಕ್ರೇನ್ ವಿರುದ್ಧ ನಡೆಯುತ್ತಿರುವ ಕದನದಲ್ಲಿ ಹೈಪರ್ಸಾನಿಕ್ ಕ್ಷಿಪಣಿಯನ್ನು ಇದೇ ಪ್ರಥಮ ಬಾರಿಗೆ ಬಳಸಲಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಶನಿವಾರ ಹೇಳಿಕೆ ನೀಡಿತ್ತು. ಇಂತಹ ಕ್ಷಿಪಣಿಗಳನ್ನು ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಯುದ್ಧದಲ್ಲಿ ಬಳಸಲಾಗಿದೆ ಎಂದು ರಶ್ಯದ ಮಿಲಿಟರಿ ವಿಶ್ಲೇಷಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News