×
Ad

​ಶಾಂತಿ ಮಾತುಕತೆಯಲ್ಲಿ ಪ್ರಗತಿಯಾಗಿಲ್ಲ: ರಶ್ಯಾ

Update: 2022-03-21 22:56 IST

  ಮಾಸ್ಕೊ, ಮಾ.21: ರಶ್ಯಾ-ಉಕ್ರೇನ್ ನಡುವಿನ ಶಾಂತಿ ಮಾತುಕತೆಯಲ್ಲಿ ಇದುವರೆಗೂ ಯಾವುದೇ ಪ್ರಗತಿ ಸಾಧ್ಯವಾಗಿಲ್ಲ. ಇನ್ನಷ್ಟು ರಚನಾತ್ಮಕ ರೀತಿಯಲ್ಲಿ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವಂತೆ ಇತರ ದೇಶಗಳು ಉಕ್ರೇನ್ ಮೇಲೆ ಪ್ರಭಾವ ಬೀರಬೇಕಾಗಿದೆ ಎಂದು ರಶ್ಯಾ ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ಡಿಮಿಟ್ರಿ ಪೆಸ್ಕೋವ್ ಸೋಮವಾರ ಹೇಳಿದ್ದಾರೆ.


 ರಶ್ಯಾ ಅಧ್ಯಕ್ಷ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಧ್ಯೆ ನೇರ ಮಾತುಕತೆ ನಡೆಯಬೇಕಿದ್ದರೆ ಸಂಧಾನ ಮಾತುಕತೆಯಲ್ಲಿ ಗಮನಾರ್ಹ ಪ್ರಗತಿಯಾಗಬೇಕಿದೆ. ಆದರೆ ಇದುವರೆಗೂ ಇದು ಸಾಧ್ಯವಾಗಿಲ್ಲ. ಆದ್ದರಿಂದ ಉಭಯ ಮುಖಂಡರ ಮುಖಾಮುಖಿ ಮಾತುಕತೆಗೆ ಈಗ ಸೂಕ್ತ ವೇದಿಕೆ ಸಜ್ಜುಗೊಂಡಿಲ್ಲ. ಅವರ ಮಾತುಕತೆಯ ವಿಷಯವನ್ನು ಸಂಧಾನ ಮಾತುಕತೆಯಲ್ಲಿ ಅಂತಿಮಗೊಳಿಸಬೇಕಾಗಿದೆ ಎಂದವರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.


 ಒಪ್ಪಂದ ಮಾಡಿಕೊಳ್ಳಲು ಮುಂದಾಗುವಂತೆ ವಿಶ್ವದ ಎಲ್ಲಾ ದೇಶಗಳೂ ಈಗ ಉಕ್ರೇನ್ ಮೇಲೆ ತಮ್ಮ ಪ್ರಭಾವ ಬೀರಬೇಕಾಗಿದೆ. ಸಭೆ ನಡೆಯಲಿರುವ ಸ್ಥಳದ ಬಗ್ಗೆ ಚರ್ಚಿಸುವುದರ ಬದಲು, ಈ ಮಾತುಕತೆ ಫಲಪ್ರದವಾಗಲು ತಾವು ಯಾವ ರೀತಿ ನೆರವಾಗಬಹುದು ಎಂದು ಈ ದೇಶಗಳು ಚರ್ಚಿಸಬೇಕಿದೆ ಎಂದವರು ಹೇಳಿದ್ದಾರೆ. ಪುಟಿನ್ ಜತೆ ಮಾತುಕತೆಗೆ ತಾನು ಸಿದ್ಧ ಎಂದು ರವಿವಾರ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದರು.
  ʼಅವರೊಂದಿಗೆ ಮಾತುಕತೆಗೆ ತಾನು ಸಿದ್ಧ. ಕಳೆದ 2 ವರ್ಷದಿಂದಲೂ ಸಿದ್ಧನಿದ್ದೆ. ಮಾತುಕತೆಯ ವಿನಹ ಈ ಯುದ್ಧ ಕೊನೆಯಾಗದು ಎಂದು ತನಗನಿಸುತ್ತದೆ. ಆದರೆ ಒಂದು ವೇಳೆ ಮಾತುಕತೆ ವಿಫಲವಾದರೆ ಬೃಹತ್ ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗಬಹುದು. ಮಾತುಕತೆಯ ಸಾಧ್ಯತೆಗಾಗಿ ನಾವು ಯಾವುದೇ ಸ್ವರೂಪವನ್ನೂ ಬಳಸಬಹುದು. ಆದರೆ ಒಂದು ವೇಳೆ ತಮ್ಮಿಬ್ಬರ ನಡುವಿನ ಮಾತುಕತೆ ವಿಫಲವಾದರೆ ಅದು 3ನೇ ವಿಶ್ವಯುದ್ಧಕ್ಕೆ ಕಾರಣವಾಗಬಹುದುʼ ಎಂದು ಝೆಲೆನ್ಸ್ಕಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News