ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿ: ಬಾಂಗ್ಲಾ ವಿರುದ್ದ ಭಾರತಕ್ಕೆ ಭರ್ಜರಿ ಜಯ, ಸೆಮಿ ಫೈನಲ್ ವಿಶ್ವಾಸ ಜೀವಂತ

Update: 2022-03-22 11:16 GMT

ಹ್ಯಾಮಿಲ್ಟನ್: ಯತಿಕಾ ಭಾಟಿಯಾ ಸಿಡಿಸಿದ ಅರ್ಧಶತಕ ಹಾಗೂ ಸ್ನೇಹ್ ರಾಣಾ ಅವರ ಆಲ್ ರೌಂಡ್ ಆಟದ ನೆರವಿನಿಂದ ಭಾರತದ ಮಹಿಳಾ ಕ್ರಿಕೆಟ್ ತಂಡವು ಬಾಂಗ್ಲಾದೇಶವನ್ನು 110 ರನ್ ಗಳ ಅಂತರದಿಂದ ಸೋಲಿಸಿದೆ. ಈ ಮೂಲಕ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪುವ ವಿಶ್ವಾಸವನ್ನು ಜೀವಂತವಾಗಿರಿಸಿಕೊಂಡಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಆಯ್ದುಕೊಂಡ ಭಾರತವು ಮಧ್ಯಮ ಇನಿಂಗ್ಸ್ ನಲ್ಲಿ ಕುಸಿತ ಕಂಡಿದ್ದರೂ ಭಾಟಿಯಾ(50 ರನ್, 80 ಎಸೆತ) ,ರಾಣಾ(27) ಹಾಗೂ ಪೂಜಾ ವಸ್ತ್ರಕರ್(30)ಸಾಹಸದಿಂದ 7 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತು.

ರಾಣಾ(4-30)ನೇತೃತ್ವದ ಸ್ಪಿನ್ ಬೌಲರ್ ಗಳು ಬಾಂಗ್ಲಾದೇಶವನ್ನು 40.3 ಓವರ್ ಗಳಲ್ಲಿ 119 ರನ್ ಗೆ ನಿಯಂತ್ರಿಸಿದರು. ಟೂರ್ನಮೆಂಟ್ ನಲ್ಲಿ ಭಾರತವು 3ನೇ ಗೆಲುವು ದಾಖಲಿಸಲು ನೆರವಾದರು. ಭರ್ಜರಿ ಗೆಲುವು ದಾಖಲಿಸಿರುವ ಭಾರತವು ತನ್ನ ನೆಟ್ ರನ್ ರೇಟ್(0.768) ಅನ್ನು ಉತ್ತಮಪಡಿಸಿಕೊಂಡಿದೆ.

ಮಿಥಾಲಿ ರಾಜ್ ನೇತೃತ್ವದ ಭಾರತ ತಂಡವು ರವಿವಾರ ನಡೆಯಲಿರುವ ತನ್ನ ಕೊನೆಯ ಲೀಗ್  ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಪಂದ್ಯಕ್ಕಿಂತ ಮೊದಲು 2ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾವು ಗುರುವಾರ ವೆಸ್ಟ್ ಇಂಡೀಸ್ ಅನ್ನು ಎದುರಿಸಲಿದೆ. ದಕ್ಷಿಣ ಆಫ್ರಿಕಾವು ವಿಂಡೀಸ್ ಅನ್ನು ಮಣಿಸಿದರೆ ಭಾರತದ ಸೆಮಿ ಫೈನಲ್ ಅವಕಾಶ ಹೆಚ್ಚಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News