ಉಕ್ರೇನ್: ಗುಂಡಿನ ದಾಳಿಯಲ್ಲಿ ರಶ್ಯದ ಪತ್ರಕರ್ತೆ ಮೃತ್ಯು

Update: 2022-03-24 17:05 GMT

ಕೀವ್, ಮಾ.24: ಉಕ್ರೇನ್‌ನ ಕೀವ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಶ್ಯದ ಪತ್ರಕರ್ತೆ ಒಕ್ಸಾನಾ ಬೌಲಿನಾ ರಶ್ಯ ಸೇನೆಯ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 ಕೀವ್‌ನಲ್ಲಿ ಕಳೆದ ವಾರ ರಶ್ಯದ ಬಾಂಬ್‌ದಾಳಿಯಿಂದ ಜರ್ಝರಿತಗೊಂಡಿದ್ದ ವಸತಿ ಸಮುಚ್ಛಯದ ವೀಡಿಯೊ ದೃಶ್ಯ ಚಿತ್ರೀಕರಣದಲ್ಲಿ ನಿರತರಾಗಿದ್ದ ಒಕ್ಸಾನಾ ರಶ್ಯ ಪಡೆಯ ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಅವರೊಂದಿಗೆ ಇದ್ದ ಇತರ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಓರ್ವ ಸ್ಥಳೀಯ ವ್ಯಕ್ತಿಯೂ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಒಕ್ಸಾನಾ ರಶ್ಯದ ತನಿಖಾ ಸುದ್ಧಿಯ ವೆಬ್‌ಸೈಟ್ ‘ದಿ ಇನ್‌ಸೈಡರ್’ ಪರ ಕಾರ್ಯನಿರ್ವಹಿಸುತ್ತಿದ್ದರು. ಈ ಮೊದಲು ರಶ್ಯದ ವಿಪಕ್ಷ ಮುಖಂಡ ಅಲೆಕ್ಸಿ ನವಾಲ್ನಿಯ ಭ್ರಷ್ಟಾಚಾರ ವಿರೋಧಿ ಪ್ರತಿಷ್ಟಾನದ ಪರ ಕೆಲಸ ಮಾಡುತ್ತಿದ್ದ ಅವರು, ಬಳಿಕ ಆ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ರಶ್ಯದಲ್ಲಿನ ಭ್ರಷ್ಟಾಚಾರದ ವಿಷಯಕ್ಕೆ ಸಂಬಂಧಿಸಿ ದಿ ಇನ್‌ಸೈಡರ್‌ಗೆ ವಿಶೇಷ ವರದಿಗಳನ್ನು ಒದಗಿಸುತ್ತಿದ್ದರು. ಉಕ್ರೇನ್ ಮೇಲೆ ರಶ್ಯ ಆಕ್ರಮಣ ಎಸಗಿದ ಬಳಿಕ ಉಕ್ರೇನ್ನ ಪ್ರಮುಖ ಪಟ್ಟಣಗಳಾದ ಕೀವ್, ಲೀವ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು ರಶ್ಯದ ಆಕ್ರಮಣದಿಂದ ಆಗಿರುವ ಹಾನಿಯ ಬಗ್ಗೆ ಹಲವು ವರದಿ ರವಾನಿಸಿದ್ದರು.

   ಒಕ್ಸಾನಾರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಸುದ್ಧಿಸಂಸ್ಥೆ, ಜನವಸತಿ ಪ್ರದೇಶದ ಮೇಲೆ ವಾಯುದಾಳಿ , ಪತ್ರಕರ್ತರ ಹತ್ಯೆ , ರಶ್ಯದ ಯುದ್ಧಾಪರಾಧ ಸೇರಿದಂತೆ ಉಕ್ರೇನ್ನಲ್ಲಿನ ಯುದ್ಧದ ವರದಿಯನ್ನು ಈ ಹಿಂದಿನಂತೆಯೇ ವಿಶ್ವದ ಮುಂದೆ ಇಡಲಾಗುವುದು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News