ಉಕ್ರೇನ್ ಕೃಷಿ ಸಚಿವರ ರಾಜೀನಾಮೆ

Update: 2022-03-24 17:16 GMT

ಕೀವ್, ಮಾ.24: ಉಕ್ರೇನ್ನ ಕೃಷಿ ಸಚಿವ ರೋಮನ್ ಲೆಶೆಂಕೊ ಹುದ್ದೆಗೆ ರಾಜೀನಾಮೆ ನೀಡಿದ್ದು, ರಾಜೀನಾಮೆಯನ್ನು ಸ್ವೀಕರಿಸುವ ಬಗ್ಗೆ ಸಂಸತ್ತಿನಲ್ಲಿ ಮತದಾನದ ಬಳಿಕ ನಿರ್ಧರಿಸಲಾಗುವುದು ಎಂದು ಉಕ್ರೇನ್ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ಗುರುವಾರ ವರದಿ ಮಾಡಿದೆ.

  ರಾಜೀನಾಮೆ ಸ್ವೀಕೃತಗೊಂಡರೆ ಹಿರಿಯ ಸಂಸದ ಮಿಕೊಲ ಸೊಲ್ಸಿಕಿ ನೂತನ ಕೃಷಿ ಸಚಿವರಾಗಲಿದ್ದಾರೆ ಎಂದೂ ವರದಿಯಾಗಿದೆ. ರಶ್ಯದ ಆಕ್ರಮಣದ ಹಿನ್ನೆಲೆಯಲ್ಲಿ ದೇಶದಲ್ಲಿ ಬಿತ್ತನೆ ಕಾರ್ಯಕ್ಕೆ ತೀವ್ರ ತೊಡಕಾಗಿದ್ದು ಕೃಷಿ ಉತ್ಪಾದನೆಗಳ ರಫ್ತು ಕಾರ್ಯಕ್ಕೆ ಅಡ್ಡಿಯಾಗಿದೆ. 2021ರಲ್ಲಿ 15 ಮಿಲಿಯ ಹೆಕ್ಟೇರ್ ಪ್ರದೇಶದಲ್ಲಿ ವಸಂತ ಋತುವಿನ ಬಿತ್ತನೆ ಕಾರ್ಯ ನಡೆದಿದ್ದರೆ ಈ ವರ್ಷ 7 ಮಿಲಿಯನ್ ಹೆಕ್ಟೇರ್ಗೆ ಕುಸಿಯಬಹುದು ಎಂದು ಈ ವಾರದ ಆರಂಭದಲ್ಲಿ ರಾಯ್ಟರ್ಸ್ ಗೆ ನೀಡಿದ ಸಂದರ್ಶನದಲ್ಲಿ ಲೆಶೆಂಕೋ ಅಭಿಪ್ರಾಯಪಟ್ಟಿದ್ದರು. 

ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವ ಪ್ರಮುಖ ದೇಶವಾಗಿರುವ ಉಕ್ರೇನ್ನಲ್ಲಿ ಯುದ್ಧದ ಕಾರಣ 2022ರ ಕೃಷಿ ಚಟುವಟಿಕೆಯ ಮೇಲೆ ಪರಿಣಾಮ ಉಂಟಾಗಿದ್ದು 2022/23ರ ಸಾಲಿನಲ್ಲಿ ಕೃಷ್ಯುತ್ಪನ್ನಗಳ ರಫ್ತು ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಕೃಷಿ ತಜ್ಞರು ಎಚ್ಚರಿಸಿದ್ದಾರೆ. ಆಕ್ರಮಣ ಆರಂಭವಾದೊಡನೆ ಸಾಸಿವೆ, ಓಟ್ಸ್, ಧಾನ್ಯ, ರಾಗಿ, ಹುರುಳಿ, ಉಪ್ಪು, ಸಕ್ಕರೆ, ಮಾಂಸ ಹಾಗೂ ಜಾನುವಾರುಗಳ ರಫ್ತಿನ ಮೇಲೆ ಉಕ್ರೇನ್ ನಿಷೇಧ ಹೇರಿತ್ತು. ಅಲ್ಲದೆ ಗೋಧಿ, ಜೋಳ ಮತ್ತು ಸೂರ್ಯಕಾಂತಿ ಎಣ್ಣೆ ರಫ್ತು ಮಾಡಬೇಕಿದ್ದರೆ ಲೈಸೆನ್ಸ್ ಪಡೆಯುವುದನ್ನು ಕಡ್ಡಾಯಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News