ಉಕ್ರೇನ್ ನ 50% ಮಕ್ಕಳು ಯುದ್ಧದಿಂದ ಸ್ಥಳಾಂತರಗೊಂಡಿದ್ದಾರೆ: ವಿಶ್ವಸಂಸ್ಥೆ

Update: 2022-03-24 17:19 GMT

  ಜಿನೆವಾ, ಮಾ.24: ಉಕ್ರೇನ್‌ನಲ್ಲಿ ಯುದ್ಧ ಆರಂಭವಾದಂದಿನಿಂದ 1.8 ಮಿಲಿಯನ್ ಗೂ ಅಧಿಕ ಮಕ್ಕಳು ದೇಶ ಬಿಟ್ಟು ತೆರಳಿದ್ದರೆ, ಇನ್ನೂ 2.5 ಮಕ್ಕಳು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ. ಒಟ್ಟು 50%ಕ್ಕೂ ಅಧಿಕ ಮಕ್ಕಳು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

  ಉಕ್ರೇನ್ನಲ್ಲಿ 1 ತಿಂಗಳಿಂದ ನಡೆಯುತ್ತಿರುವ ಯುದ್ಧದಿಂದ ಆ ದೇಶದ ಸುಮಾರು 7.5 ಮಿಲಿಯನ್ ಮಕ್ಕಳಲ್ಲಿ 4.3 ಮಿಲಿಯನ್ ಮಕ್ಕಳು ಸ್ಥಳಾಂತರಗೊಂಡಿದ್ದಾರೆ . ಆಕ್ರಮಣ ಆರಂಭವಾದಂದಿನಿಂದ ಉಕ್ರೇನ್‌ನ ಸುಮಾರು 10 ಮಿಲಿಯನ್ ಜನತೆ ಮನೆಬಿಟ್ಟು ಪಲಾಯನ ಮಾಡಿದ್ದು ಇವರಲ್ಲಿ ಸುಮಾರು 50% ದಷ್ಟು ಮಕ್ಕಳು ಎಂದು ವಿಶ್ವಸಂಸ್ಥೆಯ ಮಕ್ಕಳ ಸಮಿತಿ ಯುನಿಸೆಫ್ ಹೇಳಿದೆ.

1.8 ಮಿಲಿಯನ್ಗೂ ಅಧಿಕ ಮಕ್ಕಳು ಉಕ್ರೇನ್‌ನಿಂದ ಹೊರತೆರಳಿ ನಿರಾಶ್ರಿತರಂತೆ ಬದುಕುತ್ತಿದ್ದರೆ, 2.5 ಮಿಲಿಯನ್ ಮಕ್ಕಳು ದೇಶದೊಳಗೆ ಸ್ಥಳಾಂತರಗೊಂಡಿದ್ದಾರೆ. 2ನೇ ವಿಶ್ವಯುದ್ಧದ ಬಳಿಕ ಅತೀ ವೇಗದಲ್ಲಿ ಮತ್ತು ಅತ್ಯಧಿಕ ಪ್ರಮಾಣದಲ್ಲಿ ಮಕ್ಕಳು ಸ್ಥಳಾಂತರಗೊಂಡ ಪ್ರಕರಣ ಇದಾಗಿದೆ ಎಂದು ಯುನಿಸೆಫ್ ಮುಖ್ಯಸ್ಥೆ ಕ್ಯಾಥರಿನ್ ರಸೆಲ್ ಹೇಳಿದ್ದಾರೆ. ಇದೊಂದು ಕ್ರೂರ ಮೈಲುಗಲ್ಲು ಆಗಿದ್ದು ಮುಂದಿನ ಹಲವು ಪೀಳಿಗೆಗಳ ಮೇಲೆ ಶಾಶ್ವತ ಪರಿಣಾಮ ಉಂಟು ಮಾಡಬಹುದು ಎಂದವರು ಎಚ್ಚರಿಸಿದ್ದಾರೆ. ಮಕ್ಕಳ ಸುರಕ್ಷತೆ, ಯೋಗಕ್ಷೇಮ ಮತ್ತು ಅಗತ್ಯದ ಸೇವೆ ಪಡೆಯುವ ಅವಕಾಶಗಳ ಮೇಲೆ ತಡೆರಹಿತ ಭಯಾನಕ ಹಿಂಸಾಚಾರದ ಅಪಾಯ ಎದುರಾಗಿದೆ ಎಂದು ಯುನಿಸೆಫ್ ಹೇಳಿದೆ.

ಫೆಬ್ರವರಿ 24ರಂದು ಉಕ್ರೇನ್ ಮೇಲೆ ರಶ್ಯದ ಆಕ್ರಮಣ ಆರಂಭವಾಗಿದ್ದು ಈ ಒಂದು ತಿಂಗಳಲ್ಲಿ 81 ಮಕ್ಕಳು ಮೃತಪಟ್ಟಿದ್ದು 108 ಮಕ್ಕಳು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಹೇಳಿದೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸಂಘರ್ಷದಿಂದಾಗಿ ನಾಗರಿಕ ಮೂಲಸೌಕರ್ಯಕ್ಕೂ ಹಾನಿಯಾಗಿದೆ ಅಗತ್ಯದ ಸೇವೆ ಪಡೆಯುವ ಅವಕಾಶವೂ ನಿರಾಕರಿಸಲ್ಪಟ್ಟಿದೆ ಎಂದು ಸಮಿತಿ ಹೇಳಿದೆ. 

ಆಸ್ಪತ್ರೆ, ಆರೋಗ್ಯ ಕೇಂದ್ರ, ಆಂಬ್ಯುಲೆನ್ಸ್ ಸಹಿತ ಆರೋಗ್ಯ ಸೇವೆಗಳ ಮೇಲೆ 64 ದಾಳಿ ನಡೆದಿದೆ ಎಂದು ವಿಶ್ವ ಆರೋಗ್ಯ ಸಂಘಟನೆ ವರದಿ ಮಾಡಿದ್ದರೆ, 500ಕ್ಕೂ ಅಧಿಕ ಶಾಲೆ ಹಾಗೂ ಶಿಕ್ಷಣ ವ್ಯವಸ್ಥೆಯ ಮೇಲೆ ದಾಳಿಯಾಗಿದೆ ಎಂದು ಉಕ್ರೇನ್ ನ ಶಿಕ್ಷಣ ಇಲಾಖೆ ಹೇಳಿದೆ.

ಸುಮಾರು 1.4 ಮಿಲಿಯನ್ ಜನತೆಗೆ ಶುದ್ಧ ಕುಡಿಯುವ ನೀರು ಲಭಿಸುತ್ತಿಲ್ಲ, 4.6 ಮಿಲಿಯನ್ ಜನತೆಗೆ ಸೀಮಿತ ಪ್ರಮಾಣದಲ್ಲಿ ನೀರಿನ ಲಭ್ಯತೆ ಇದ್ದರೂ, ಈ ವ್ಯವಸ್ಥೆಯೂ ಮೊಟಕುಗೊಳ್ಳುವ ಅಪಾಯವಿದೆ. 6 ತಿಂಗಳಿನಿಂದ 23 ತಿಂಗಳವರೆಗಿನ 4,50,000 ಮಕ್ಕಳಿಗೆ ಪೂರಕ ಆಹಾರದ ನೆರವಿನ ಅಗ್ಯವಿದೆ ಎಂದು ಯುನಿಸೆಫ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News