ಅಮೆರಿಕ: ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಇಳಿಮುಖ

Update: 2022-03-24 17:26 GMT
Photo: PTI

ವಾಷಿಂಗ್ಟನ್, ಮಾ.24: ಅಮೆರಿಕದಲ್ಲಿ ನಿರುದ್ಯೋಗ ಸೌಕರ್ಯಕ್ಕೆ ಅರ್ಜಿ ಸಲ್ಲಿಸುವವರ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಕಳೆದ 52 ವರ್ಷಗಳಲ್ಲೇ ಅತ್ಯಂತ ಕನಿಷ್ಟ ಮಟ್ಟಕ್ಕೆ ಇಳಿದಿದೆ ಎಂದು ಅಮೆರಿಕದ ಕಾರ್ಮಿಕ ಇಲಾಖೆಯ ವರದಿ ಹೇಳಿದೆ. ಏರುತ್ತಿರುವ ವೆಚ್ಚ ಹಾಗೂ ಕೊರೋನ ಸಾಂಕ್ರಾಮಿಕದ ನಡುವೆಯೇ ಅಮೆರಿಕದ ಉದ್ಯೋಗ ಮಾರುಕಟ್ಟೆ ಮತ್ತೆ ಚೇತರಿಸಿಕೊಂಡಿರುವುದು ಇದಕ್ಕೆ ಕಾರಣವಾಗಿದೆ. ಮಾರ್ಚ್ 19ಕ್ಕೆ ಅಂತ್ಯಗೊಳ್ಳುವ ವಾರದಲ್ಲಿ ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆ 28,000ದಷ್ಟು ಕಡಿಮೆಯಾಗಿ 1,87,000ಕ್ಕೆ ತಲುಪಿದೆ. ಈ ಹಿಂದೆ 4 ವಾರದ ಸರಾಸರಿ ಪ್ರಮಾಣ 2,23,250ರಷ್ಟಿದ್ದರೆ ಈಗ ಇದು 2,11,750ಕ್ಕೆ ತಲುಪಿದೆ ಎಂದು ವರದಿ ಹೇಳಿದೆ.

ಫೆಬ್ರವರಿ ತಿಂಗಳಿನಲ್ಲಿ 6,78,000 ಉದ್ಯೋಗ ಸೃಷ್ಟಿಯಾಗಿದ್ದು ಇದು ಕಳೆದ ಜುಲೈ ಬಳಿಕದ ಅತ್ಯಧಿಕ ಪ್ರಮಾಣವಾಗಿದೆ. ಜನವರಿಯಲ್ಲಿ ನಿರುದ್ಯೋಗದ ಪ್ರಮಾಣ 4% ಇದ್ದರೆ, ಫೆಬ್ರವರಿಯಲ್ಲಿ 3.8%ಕ್ಕೆ ಕುಸಿದಿದೆ. ಕೊರೋನ ಸಾಂಕ್ರಾಮಿಕ ಆರಂಭಗೊಂಡ ಬಳಿಕದ ಅತೀ ಕನಿಷ್ಟ ದರ ಇದಾಗಿದೆ. 1980ರ ಬಳಿಕ ಅಮೆರಿಕದಲ್ಲಿ ಗರಿಷ್ಟ ಪ್ರಮಾಣಕ್ಕೆ ಏರಿರುವ ಹಣದುಬ್ಬರ ಸಮಸ್ಯೆಯನ್ನು ನಿಯಂತ್ರಿಸಲು ಫೆಡರಲ್ ರಿಸರ್ವ್ ಬ್ಯಾಂಕ್ (ಅಮೆರಿಕದ ಪ್ರಧಾನ ಬ್ಯಾಂಕಿಂಗ್ ವ್ಯವಸ್ಥೆ) ಬೆಂಚ್ಮಾರ್ಕ್ ಅಲ್ಪಾವಧಿಯ ಬಡ್ಡಿದರವನ್ನು ಹೆಚ್ಚಿಸುವ ಜತೆಗೆ ಈ ವರ್ಷ ಮತ್ತೂ 6 ಬಾರಿ ಬಡ್ಡಿದರ ಹೆಚ್ಚಿಸುವ ಸಂಕೇತ ರವಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News