×
Ad

ಇಂದಿನಿಂದ ಐಪಿಎಲ್ ಕ್ರಿಕೆಟ್ ಕಲರವ: ಮೊದಲ ಪಂದ್ಯದಲ್ಲಿ ಚೆನ್ನೈ-ಕೆಕೆಆರ್ ಹಣಾಹಣಿ

Update: 2022-03-26 11:24 IST
photo: .iplt20.com

ಮುಂಬೈ: ಭಾರತೀಯ ಕ್ರಿಕೆಟ್‌ನ ಜನಪ್ರಿಯ ದೇಶೀಯ ಟ್ವೆಂಟಿ-20 ಟೂರ್ನಿ ಐಪಿಎಲ್ ಮತ್ತೆ ಸ್ವದೇಶದಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಈ ಬಾರಿ ಐಪಿಎಲ್ ಸುದೀರ್ಘವಾಗಿ ಸಾಗಲಿದ್ದು 2011ರ ಬಳಿಕ ಮೊದಲ ಬಾರಿ ವಿಶ್ವ ಕ್ರಿಕೆಟ್‌ನ ಪ್ರತಿಷ್ಠಿತ ದೇಶೀಯ ಟ್ವೆಂಟಿ-20 ಟ್ರೋಫಿಗಾಗಿ 10 ತಂಡಗಳು ಸೆಣಸಾಡಲಿವೆ.

ಈ ವರ್ಷದ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಲಕ್ನೊ ಸೂಪರ್‌ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ಹೊಸ ತಂಡಗಳಾಗಿವೆ.

ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕ್ರಿಕೆಟ್ ಮಂಡಳಿಯ ಪ್ರಮುಖರು ನಿಟ್ಟುಸಿರು ಬಿಡುತ್ತಿದ್ದಾರೆ. ಎರಡು ವರ್ಷಗಳ ಅಂತರದ ಬಳಿಕ ಐಪಿಎಲ್ ಟೂರ್ನಿಯನ್ನು ಸಂಪೂರ್ಣವಾಗಿ ಭಾರತದಲ್ಲೇ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ ಕ್ರೀಡಾಂಗಣ ಸಾಮರ್ಥ್ಯದ 25 ಪ್ರತಿಶತದಷ್ಟು ಪ್ರೇಕ್ಷಕರಿಗೆ ಪಂದ್ಯ ವೀಕ್ಷಣೆಗೆ ಅವಕಾಶ ನೀಡಲಾಗುವುದು.

2 ಹೊಸ ತಂಡಗಳ ಸೇರ್ಪಡೆಯೊಂದಿಗೆ ಪಂದ್ಯಗಳ ಸಂಖ್ಯೆಯನ್ನು 60ರಿಂದ 74ಕ್ಕೆ ಏರಿಸಲಾಗಿದೆ. ಈ ಹಿಂದಿನಂತೆಯೇ ಎಲ್ಲ ತಂಡಗಳು ತಲಾ 14 ಪಂದ್ಯಗಳನ್ನು ಆಡುತ್ತವೆ. ಆದರೆ, ದೀರ್ಘಾವಧಿಯ ಟೂರ್ನಮೆಂಟ್ ಕ್ರಿಕೆಟ್‌ನ ತೀವ್ರತೆ ಹಾಗೂ ಗುಣಮಟ್ಟದ ಮೇಲೆ ಪರಿಣಾಮಬೀರುವ ಸಾಧ್ಯತೆಯಿದ್ದು, ಕಾಲವೇ ಇದಕ್ಕೆ ಉತ್ತರಿಸಬೇಕು.

ಈ ವರ್ಷದ ಐಪಿಎಲ್‌ನ ಎಲ್ಲ ಲೀಗ್ ಪಂದ್ಯಗಳು ಮಹಾರಾಷ್ಟ್ರದ ನಾಲ್ಕು ತಾಣಗಳಲ್ಲಿ(ಮುಂಬೈನಲ್ಲಿ ಮೂರು ಹಾಗೂ ಪುಣೆಯಲ್ಲಿ ಒಂದು)ಆಯೋಜಿಸಲಾಗುತ್ತದೆ. ಚೆನ್ನೈ ಸೇರಿದಂತೆ ಎಲ್ಲ ತಂಡಗಳು ತನ್ನ 14 ಲೀಗ್ ಪಂದ್ಯಗಳನ್ನು ಮುಂಬೈನ ವಾಂಖೆಡೆ ಸ್ಟೇಡಿಯಂ ಹಾಗೂ ಬ್ರಬೋರ್ನ್ ಸ್ಟೇಡಿಯಂ, ನವಿ ಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಂ ಹಾಗೂ ಪುಣೆಯ ಎಂಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಆಡಲಿವೆ.

ಇತರ 9 ತಂಡಗಳಂತೆಯೇ ಐದು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಐದು ತಂಡಗಳ ವಿರುದ್ಧ ಎರಡು ಬಾರಿ ಹಾಗೂ ಉಳಿದ 4 ತಂಡಗಳ ಎದುರು ಒಂದು ಬಾರಿ ಆಡಲಿದೆ. ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೆಕೆಆರ್ 2021ರಲ್ಲಿ 2ನೇ ಸ್ಥಾನ ಪಡೆದಿತ್ತು. ಈ ಬಾರಿ ನೂತನ ನಾಯಕ ಶ್ರೇಯಸ್ ಅಯ್ಯರ್‌ರೊಂದಿಗೆ ಕಣಕ್ಕಿಳಿಯಲಿದೆ. 2012 ಹಾಗೂ 2014ರಲ್ಲಿ ಪ್ರಶಸ್ತಿ ಜಯಿಸಿರುವ ಕೆಕೆಆರ್ ಹಿಂದಿನ ಯಶಸ್ಸನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದೆ. ಕಳೆದ ವರ್ಷ ಐಪಿಎಲ್ ಫೈನಲ್‌ನಲ್ಲಿ ಎದುರಿಸಿದ್ದ ಚೆನ್ನೈ ತಂಡವನ್ನೇ ಈ ವರ್ಷದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಎದುರಿಸಲಿರುವ ಕೆಕೆಆರ್ ಶುಭಾರಂಭದ ನಿರೀಕ್ಷೆಯಲ್ಲಿದೆ.

‘ಎ‘ ಗುಂಪಿನಲ್ಲಿರುವ ಕೆಕೆಆರ್ ತಂಡವು ಮುಂಬೈ, ರಾಜಸ್ಥಾನ, ಡೆಲ್ಲಿ, ಲಕ್ನೊ ಹಾಗೂ ಹೈದರಾಬಾದ್ ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನು ಹಾಗೂ ಚೆನ್ನೈ, ಆರ್‌ಸಿಬಿ, ಪಂಜಾಬ್ ಹಾಗೂ ಗುಜರಾತ್ ಟೈಟಾನ್ಸ್ ವಿರುದ್ಧ ತಲಾ 1 ಪಂದ್ಯಗಳನ್ನು ಆಡಲಿದೆ. ಕ್ಯುರೇಟರ್‌ಗಳಿಗೆ ಸುಮಾರು 2 ತಿಂಗಳ ಕಾಲ ಪಿಚ್‌ಗಳ ನೈಜತೆಯನ್ನು ಕಾಪಾಡಿಕೊಳ್ಳುವುದು ಒಂದು ಸವಾಲಾಗಿದೆ. ಕೆಂಪುಮಣ್ಣಿನ ಪಿಚ್‌ಗಳಾದ ವಾಂಖೆಡೆ, ಸಿಸಿಐ ಹಾಗೂ ಡಿ.ವೈ.ಪಾಟೀಲ್ ಸ್ಟೇಡಿಯಂಗಳಲ್ಲಿ ಹೆಚ್ಚಿನ ಬೌನ್ಸ್ ನಿರೀಕ್ಷಿಸಲಾಗುತ್ತಿದೆ. ಪುಣೆಯಲ್ಲಿನ ಕಪ್ಪು ಮಣ್ಣಿನ ಪಿಚ್ ಸ್ಪಿನ್ ಸ್ನೇಹಿ ಆಗಿರುವ ಸಾಧ್ಯತೆಯಿದೆ. ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯದಲ್ಲಿ ವಿಶ್ವಕಪ್ ಟೂರ್ನಿ ನಡೆಯುತ್ತಿರುವ ಕಾರಣ ಐಪಿಎಲ್ ಟೂರ್ನಿಯು ಭಾರತದ ಕೆಲವು ಆಟಗಾರರ ಭವಿಷ್ಯವನ್ನು ನಿರ್ಧರಿಸುತ್ತದೆ.

ಧೋನಿಗೆ ಅಂತಿಮ ಐಪಿಎಲ್?

ಐಪಿಎಲ್ ಉದ್ಘಾಟನಾ ಪಂದ್ಯ ಆರಂಭವಾಗುವ ಕೇವಲ 3 ದಿನಗಳ ಮೊದಲು ಎಂ.ಎಸ್. ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ತ್ಯಜಿಸಿದ್ದಾರೆ. ಧೋನಿ ಈ ವರ್ಷ ಎಲ್ಲ ಐಪಿಎಲ್ ಪಂದ್ಯಗಳಿಗೆ ಲಭ್ಯವಿರಲಿದ್ದಾರೆಯೇ ಎಂಬ ಕುರಿತು ಊಹಾಪೋಹಗಳಿರುವಾಗಲೇ ಧೋನಿಯವರ ಈ ನಿರ್ಧಾರ ಆಘಾತಕಾರಿ ಎನಿಸಿಕೊಳ್ಳಲಿಲ್ಲ. ನಾಯಕತ್ವವನ್ನು ತ್ಯಜಿಸಿರುವ 40ರ ವಯಸ್ಸಿನ ಧೋನಿ, ಆಲ್‌ರೌಂಡರ್ ರವೀಂದ್ರ ಜಡೇಜಗೆ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದಾರೆ. ಜಡೇಜ ಮೊದಲ ಬಾರಿ ಪ್ರಮುಖ ಟೂರ್ನಿಯಲ್ಲಿ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅಂತರಾರ್ಷ್ಟ್ರೀಯ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಜಡೇಜಗೆ ತಂಡದ ನಾಯಕತ್ವದ ಹೊಣೆ ಹೆಚ್ಚು ವಿಶ್ವಾಸವನ್ನು ತುಂಬಬಹುದು. ಧೋನಿ, ಜಡೇಜಗೆ ಮಾರ್ಗದರ್ಶನ ನೀಡಬಹುದು.

ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಅರ್ಹತೆ ಹೆಚ್ಚಿಸಿಕೊಳ್ಳಲು ಅವಕಾಶ

ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬಾರಿ ಫೈನಲ್ ತಲುಪಲು ನಾಯಕತ್ವವಹಿಸಿದ್ದ ಅಯ್ಯರ್ ಭುಜನೋವಿನ ಕಾರಣಕ್ಕೆ ನಾಯಕತ್ವದಿಂದ ಬದಿಗೆ ಸರಿದರು. ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದ ಅಯ್ಯರ್ ಭಾರೀ ಮೊತ್ತಕ್ಕೆ ಕೆಕೆಆರ್ ಪಾಲಾದರು. ಸದ್ಯ ಟೀಮ್ ಇಂಡಿಯಾದಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಅಯ್ಯರ್ ಐಪಿಎಲ್‌ನಲ್ಲೂ ಇದೇ ಪ್ರದರ್ಶನ ಮುಂದುವರಿಸಿ ಕೆಕೆಆರ್ ಮೂರನೇ ಪ್ರಶಸ್ತಿ ಜಯಿಸಲು ನೆರವಾಗುವ ವಿಶ್ವಾಸದಲ್ಲಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. 2019ರಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಯಿಂದಾಗಿ ಟೀಮ್ ಇಂಡಿಯಾದಲ್ಲಿ ನಿಯಮಿತವಾಗಿ ಬೌಲಿಂಗ್ ಮಾಡಲು ಅಸಮರ್ಥರಾದ ಪಾಂಡ್ಯ ತನ್ನ ಸ್ಥಾನವನ್ನು ಕಳೆದುಕೊಂಡರು. ಇದೀಗ ಅವರು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗಿದೆ.ಪಾಂಡ್ಯ ಐಪಿಎಲ್‌ನಲ್ಲಿ ಬೌಲಿಂಗ್ ಮಾಡುತ್ತಾರೆಯೇ? ಎಂಬ ಕುರಿತು ಖಚಿತತೆ ಇಲ್ಲ. ತನ್ನ ವೃತ್ತಿ ಜೀವನವನ್ನು ಪುನರುಜ್ಜೀವನ ಗೊಳಿಸಲು ಹಾಗೂ ಗುಜರಾತ್ ಟೈಟಾನ್ಸ್ ತನ್ನ ಮೊದಲ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ನೋಡಿಕೊಳ್ಳುವ ಹೊಣೆ ಪಾಂಡ್ಯ ಹೆಗಲೇರಿದೆ. ಪಾಂಡ್ಯ ಅವರ ಆತ್ಮೀಯ ಸ್ನೇಹಿತ ಕೆ.ಎಲ್.ರಾಹುಲ್ ಯುವ ಆಟಗಾರರನ್ನು ಒಳಗೊಂಡಿರುವ ಲಕ್ನೊ ತಂಡಕ್ಕೆ ಸ್ಫೂರ್ತಿಯಾಗುವ ಅಗತ್ಯವಿದೆ. ಭಾರತ ಹಾಗೂ ಐಪಿಎಲ್ ತಂಡದಲ್ಲಿ ನಾಯಕನಾಗುವ ಅವಕಾಶವನ್ನು ಪಡೆದಿರುವ ರಾಹುಲ್ ಈ ಬಾರಿಯ ಐಪಿಎಲ್‌ನಲ್ಲಿ ಓರ್ವ ಆರಂಭಿಕ ಬ್ಯಾಟರ್ ಆಗಿ ಸಾಕಷ್ಟು ರನ್ ಗಳಿಸುವ ಜೊತೆಗೆ ತಂಡವನ್ನು ದಕ್ಷವಾಗಿ ಮುನ್ನಡೆಸುವತ್ತ ಗಮನ ಹರಿಸಲು ಬಯಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News