ಸ್ವಿಸ್ ಓಪನ್: ಪಿ.ವಿ. ಸಿಂಧು ಚಾಂಪಿಯನ್

Update: 2022-03-27 11:54 GMT
ಪಿ.ವಿ. ಸಿಂಧು

ಬಾಸೆಲ್, ಮಾ.27: ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ರವಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಥಾಯ್ಲೆಂಡ್‌ನ ಬುಸನಾನ್ ಓಂಗ್‌ಬಮ್ರುಂಗ್‌ಫನ್‌ರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿದ ಭಾರತದ ಶಟ್ಲರ್ ಪಿ.ವಿ. ಸಿಂಧು ಈ ವರ್ಷ ಎರಡನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸತತ ಎರಡನೇ ಬಾರಿ ಫೈನಲ್‌ನಲ್ಲಿ ಆಡಿರುವ ಸಿಂಧು 49 ನಿಮಿಷಗಳ ಕಾಲ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಥಾಯ್ಲೆಂಡ್ ಆಟಗಾರ್ತಿ ಬುಸನಾನ್‌ರನ್ನು 21-16, 21-8 ಗೇಮ್‌ಗಳ ಅಂತರದಿಂದ ಸೋಲಿಸಿದರು. ಸಿಂಧು ಅವರು ಬುಸನಾನ್ ವಿರುದ್ಧ ಆಡಿರುವ 17 ಪಂದ್ಯಗಳಲ್ಲಿ 16ನೇ ಬಾರಿ ಗೆಲುವು ದಾಖಲಿಸಿದ್ದು 2019ರ ಹಾಂಕಾಂಗ್ ಓಪನ್‌ನಲ್ಲಿ ಮಾತ್ರ ಸೋಲನುಭವಿಸಿದ್ದರು.

ಕಳೆದ ಆವೃತ್ತಿಯ ಫೈನಲ್‌ನಲ್ಲಿ ಸಿಂಧು ರಿಯೋ ಒಲಿಂಪಿಕ್ಸ್ ಚಾಂಪಿಯನ್ ಕರೊಲಿನಾ ಮರಿನ್ ವಿರುದ್ಧ ಸೋತಿದ್ದರು. 26ರ ಹರೆಯದ ಹೈದರಾಬಾದ್ ಆಟಗಾರ್ತಿ ಈ ಹಿಂದೆ ಬಾಸೆಲ್‌ನಲ್ಲಿ ಸಂತೋಷದ ಕ್ಷಣವನ್ನು ಕಳೆದಿದ್ದರು. ಇದೇ ಸ್ಥಳದಲ್ಲಿ 2019ರಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಜಯಿಸಿದ್ದರು. ಸಿಂಧು ಈ ವರ್ಷದ ಜನವರಿಯಲ್ಲಿ ಲಕ್ನೊದಲ್ಲಿ ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಸೂಪರ್ 300 ಪ್ರಶಸ್ತಿಯನ್ನು ಜಯಿಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News