×
Ad

ಕೀವ್ ಸಮೀಪ ಸೇನೆಯ ಚಟುವಟಿಕೆ ಕಡಿತಕ್ಕೆ ಸಿದ್ಧ: ರಶ್ಯ ಘೋಷಣೆ

Update: 2022-03-29 23:42 IST
photo pti

ಇಸ್ತಾನ್ಬುಲ್, ಮಾ.29:  ಉಕ್ರೇನ್‌ನ  ರಾಜಧಾನಿ ಕೀವ್ ಹಾಗೂ ಉತ್ತರಪ್ರಾಂತದ ಚೆರ್ನಿಹಿವ್ ನಗರದ ಸಮೀಪ ತಾನು ನಡೆಸುತ್ತಿರುವ ಸೇನಾ ಚಟುವಟಿಕೆಯನ್ನು ಮೂಲಭೂತವಾಗಿ ಕಡಿಮೆಗೊಳಿಸಲು ತಾನು ಸಿದ್ಧ ಎಂದು ರಶ್ಯ ಹೇಳಿದೆ. ಟರ್ಕಿ ರಾಜಧಾನಿ ಇಸ್ತಾನ್‌ಬುಲ್‌ನಲ್ಲಿ ರಶ್ಯ-ಉಕ್ರೇನ್ ಪ್ರತಿನಿಧಿಗಳ ಮಧ್ಯೆ ನಡೆದ ಮುಖಾಮುಖಿ ಮಾತುಕತೆಯ ಬಳಿಕ ಮಾತನಾಡಿದ ರಶ್ಯದ ಸಹಾಯಕ ರಕ್ಷಣಾ ಸಚಿವ ಅಲೆಕ್ಸಾಂಡರ್ ಫೊಮಿನ್, ಇದು ವಿಶ್ವಾಸ ವೃದ್ಧಿಸುವ ನಿಟ್ಟಿನಲ್ಲಿ ಇಟ್ಟಿರುವ ಹೆಜ್ಜೆಯಾಗಿದೆ ಎಂದರು. 

ಉಭಯ ದೇಶಗಳ ನಡುವೆ ನಡೆದ ಹಲವು ಸುತ್ತುಗಳ ಸಂಧಾನ ಮಾತುಕತೆ ವಿಫಲವಾಗಿದ್ದು ಈಗ ಟರ್ಕಿಯಲ್ಲಿ ನಡೆಯುತ್ತಿರುವ ಸಂಧಾನ ಮಾತುಕತೆ ವಿಶ್ವದ ಗಮನ ಸೆಳೆದಿದೆ. ರಶ್ಯದ ಪ್ರಸ್ತಾವನೆಗೆ ಪ್ರತಿಕ್ರಿಯಿಸಿರುವ ಉಕ್ರೇನ್, ತಟಸ್ಥ ನಿಲುವು ತಳೆಯಲು ತಾವು ಸಿದ್ಧ ಎಂದಿದೆ(ಇದು ರಶ್ಯದ ಪ್ರಮುಖ ಆಗ್ರಹವಾಗಿದೆ). ಆದರೆ ಉಕ್ರೇನ್‌ನ  ಭದ್ರತೆಗೆ ಅಪಾಯ ಎದುರಾದರೆ ಆಗ ಹೊಣೆ ವಹಿಸಲು ತಾನು ಸಿದ್ಧ ಎಂದು ಇತರ ಯಾವುದೇ ದೇಶ ಖಾತರಿ ನೀಡಬೇಕು ಎಂದು ಹೇಳಿದೆ. ರಶ್ಯ ಮತ್ತು ಉಕ್ರೇನ್ ಅಧ್ಯಕ್ಷರ ಮಧ್ಯೆ ಮಾತುಕತೆಯ ಬಳಿಕ ಅಂತಿಮ ಒಪ್ಪಂದ ಏರ್ಪಡಲಿದೆ. ಆದರೆ ಅದಕ್ಕೂ ಮುನ್ನ ಉಕ್ರೇನ್ನಾದ್ಯಂತ ಪೂರ್ಣ ಶಾಂತಿ ನೆಲೆಸಿರಬೇಕು ಎಂದು ಉಕ್ರೇನ್ ಹೇಳಿದೆ.

ಗಮನಾರ್ಹ ಪ್ರಗತಿ

ಇಸ್ತಾನ್‌ಬುಲ್‌ನಲ್ಲಿ  ರಶ್ಯ-ಉಕ್ರೇನ್ ನಿಯೋಗದ ಮಧ್ಯೆ ನಡೆಯುತ್ತಿರುವ ಸಂಧಾನ ಮಾತುಕತೆಯಲ್ಲಿ ಗಮನಾರ್ಹ ಪ್ರಗತಿಯಾಗಿದೆ ಎಂದು ಟರ್ಕಿಯ ವಿದೇಶ ಸಚಿವ ಮೆವ್ಲತ್ ಕವುಸೊಗ್ಲು ಹೇಳಿದ್ದಾರೆ. ಮೂರು ಗಂಟೆ ನಡೆದ ಮಾತುಕತೆಯ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, ರಶ್ಯದ ಆಕ್ರಮಣದ ಬಳಿಕ ನಡೆದ ಸಂಧಾನ ಮಾತುಕತೆಯಲ್ಲಿ ಇದೇ ಮೊದಲ ಬಾರಿಗೆ ಗಮನಾರ್ಹ ಪ್ರಗತಿಯಾಗಿದೆ. ಬುಧವಾರ ಮಾತುಕತೆ ಮುಂದುವರಿಯುವುದಿಲ್ಲ ಎಂದವರು ಹೇಳಿದ್ದಾರೆ.

 ಬಾಲ್ಟಿಕ್ ದೇಶಗಳ ರಾಜತಾಂತ್ರಿಕರನ್ನು ಉಚ್ಛಾಟಿಸಿದ ರಶ್ಯ

ಮುಯ್ಯಿಗೆ ಮುಯ್ಯಿ ಎಂಬಂತೆ ರಶ್ಯವು 3 ಬಾಲ್ಟಿಕ್ ದೇಶಗಳ 10 ರಾಜತಾಂತ್ರಿಕರನ್ನು ದೇಶದಿಂದ ಉಚ್ಛಾಟಿಸಿದೆ ಎಂದು ವರದಿಯಾಗಿದೆ.

ಎಸ್ಟೋನಿಯಾ, ಲಾತ್ವಿಯಾದ ತಲಾ ಮೂವರು ಮತ್ತು ಲಿಥ್ವೇನಿಯಾದ 4 ರಾಜತಾಂತ್ರಿಕರನ್ನು ಉಚ್ಛಾಟಿಸಿರುವುದಾಗಿ ರಶ್ಯ ಘೋಷಿಸಿದೆ. 2 ವಾರದ ಹಿಂದೆ ಈ ಮೂರು ದೇಶಗಳು ರಶ್ಯದ 10 ರಾಜತಾಂತ್ರಿಕರನ್ನು ಉಚ್ಛಾಟಿಸಿದ್ದವು. ಈ ಹಿಂದಿನ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಈ ಮೂರು ದೇಶಗಳು ಈಗ ನೇಟೊ ಮತ್ತು ಯುರೋಪಿಯನ್ ಯೂನಿಯನ್ನ ಸದಸ್ಯರಾಗಿವೆ. ಅಲ್ಲದೆ ಉಕ್ರೇನ್ ಮೇಲಿನ ರಶ್ಯದ ಆಕ್ರಮಣದ ಹಿನ್ನೆಲೆಯಲ್ಲಿ ರಶ್ಯಕ್ಕೆ ವಿಧಿಸಲಾಗಿರುವ ನಿರ್ಬಂಧವನ್ನು ಸಮರ್ಥಿಸಿಕೊಂಡಿವೆ.
ರಶ್ಯ ಸೋಮವಾರ ಸ್ಲೊವಾಕಿಯಾದ ರಾಜತಾಂತ್ರಿಕರನ್ನು ಉಚ್ಛಾಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News