ಶ್ರೀಲಂಕಾ: ಅಗತ್ಯ ವಸ್ತುಗಳ ಕೊರತೆ, ಹಲವೆಡೆ ವ್ಯಾಪಿಸಿದ ಪ್ರತಿಭಟನೆ

Update: 2022-03-29 18:22 GMT
photo courtesy:twitter/@jaunnewsusa

ಕೊಲಂಬೊ, ಮಾ.29: ಸ್ವಾತಂತ್ರ್ಯ ಪಡೆದಂದಿನಿಂದ ಕಂಡು ಕೇಳಿರದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ದೈನಂದಿನ ವಸ್ತುಗಳ ಕೊರತೆ ಮತ್ತು ಬೆಲೆ ಗಗನಕ್ಕೇರಿರುವುದರಿಂದ ಜೀವನ ನಿರ್ವಹಣೆ ದುಸ್ತರವಾಗಿದೆ . ಇದೀಗ ಜನರ ಅಸಹನೆ ಕಟ್ಟೆಯೊಡೆದು ಹಲವೆಡೆ ಪ್ರತಿಭಟನೆ ನಡೆಯುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ‌

ಪೆಟ್ರೋಲ್ ಪಂಪ್ಗಳ ಎದುರು ಬೆಳಗ್ಗಿನ ಜಾವವೇ ವಾಹನ ಸವಾರರ ಮಾರುದ್ದದ ಸಾಲು ಬೆಳೆದಿರುತ್ತದೆ. ಸೀಮಿತ ದಾಸ್ತಾನು ಮುಗಿದ ಬಳಿಕ ಅನಿವಾರ್ಯವಾಗಿ ಬಾಗಿಲು ಮುಚ್ಚುವ ಸಂದರ್ಭ ಎದುರಾದಾಗ ಹಲವು ಬಾರಿ ಜನರು ಹಿಂಸಾತ್ಮಕವಾಗಿ ಪ್ರತಿಭಟಿಸಿದ್ದರಿಂದ ಈಗ ದೇಶದೆಲ್ಲೆಡೆಯ ಪೆಟ್ರೋಲ್ ಪಂಪ್‌ಗಳಿಗೆ ಯೋಧರ ಭದ್ರತೆ ಒದಗಿಸಲಾಗಿದೆ. ಮಾರ್ಚ್ 21ರಂದು ಪೆಟ್ರೋಲ್ ಪಂಪ್ ಒಂದರ ಎದುರು ಪೆಟ್ರೋಲ್ ತುಂಬಿಸುವ ವಿಷಯದಲ್ಲಿ ಎರಡು ವಾಹನ ಚಾಲಕರ ಮಧ್ಯೆ ನಡೆದ ಮಾತಿನ ಚಕಮಕಿಯಲ್ಲಿ ಓರ್ವನನ್ನು ಇರಿದು ಹತ್ಯೆ ಮಾಡಲಾಗಿದೆ.

ಪೆಟ್ರೋಲ್ ಪಂಪ್ಗಳಲ್ಲಿ ಮಾತಿನ ಚಕಮಕಿ, ಪರಸ್ಪರ ಕೈ ಮಿಲಾಯಿಸುವ ಘಟನೆ ಸರ್ವೇ ಸಾಮಾನ್ಯವಾಗಿದೆ. ತೈಲ ಪೂರೈಕೆಯಲ್ಲಿನ ಅವ್ಯವಸ್ಥೆಯನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗೆ ರೈತರು ಮತ್ತು ಮೀನುಗಾರರೂ ಕೈ ಜೋಡಿಸಿದ್ದಾರೆ. ಇನ್ನೊಂದೆಡೆ, ದೈನಂದಿನ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಜನಸಾಮಾನ್ಯರಿಗೆ ಎರಡು ಕಡೆ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News