ಉಕ್ರೇನ್ ನ ಸರಕಾರಿ ಕಟ್ಟಡಕ್ಕೆ ಅಪ್ಪಳಿಸಿದ ರಶ್ಯದ ಕ್ಷಿಪಣಿ

Update: 2022-03-29 18:49 GMT

ಕೀವ್, ಮಾ.29: ದಕ್ಷಿಣ ಉಕ್ರೇನ್ನ ಬಂದರು ನಗರ ಮಿಕೊಲೈವ್ನಲ್ಲಿನ ಪ್ರಾದೇಶಿಕ ಆಡಳಿತ ಕಟ್ಟಡಕ್ಕೆ ಮಂಗಳವಾರ ರಶ್ಯದ ಕ್ಷಿಪಣಿಯೊಂದು ಅಪ್ಪಳಿಸಿದ್ದು ಕಟ್ಟಡದಲ್ಲಿ ಬಿರುಕು ಮೂಡಿದೆ. ಕಟ್ಟಡದ ಒಂದು ಭಾಗ ಕುಸಿದಿದ್ದು ಅವಶೇಷಗಳಡಿ ಕನಿಷ್ಟ 11 ಮಂದಿ ಸಿಲುಕಿರುವ ಶಂಕೆಯಿದೆ ಎಂದು ಸ್ಥಳೀಯ ಗವರ್ನರ್ ವಿಟಾಲಿಯ್ ಕಿಮ್ ಹೇಳಿದ್ದಾರೆ.

ಕಟ್ಟಡದ ಒಂದು ಪಾರ್ಶ್ವದಲ್ಲಿ ದೊಡ್ಡದಾದ ರಂಧ್ರ ಉಂಟಾಗಿರುವುದನ್ನು ರಾಯ್ಟರ್ಸ್ ದೃಢಪಡಿಸಿದೆ. ಇಡೀ ಪ್ರದೇಶವನ್ನು ಉಕ್ರೇನ್ನ ಅಧಿಕಾರಿಗಳು ಸುತ್ತುವರಿದಿದ್ದು ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್ಗಳು ಸ್ಥಳಕ್ಕೆ ಧಾವಿಸಿವೆ ಎಂದು ವರದಿಯಾಗಿದೆ.
  ಅವರು ಕಟ್ಟಡದ ಅರ್ಧಭಾಗವನ್ನು ನಾಶಗೊಳಿಸಿದ್ದು ನನ್ನ ಕಚೇರಿಗೂ ಹಾನಿಯಾಗಿದೆ. ಕಟ್ಟಡಕ್ಕೆ ವಿದ್ಯುತ್ಪೂರೈಕೆ ಮೊಟಕುಗೊಂಡಿದೆ . ದಾಳಿ ಸಂದರ್ಭ ಕಟ್ಟಡದಲ್ಲಿದ್ದ ಬಹುತೇಕ ಮಂದಿ ಪವಾಡಸದೃಶ ಪಾರಾಗಿದ್ದಾರೆ. ಕುಸಿದು ಬಿದ್ದ ಕಟ್ಟಡದ ಅವಶೇಷಗಳಡಿ 8 ನಾಗರಿಕರು ಹಾಗೂ 3 ಯೋಧರು ಸಿಕ್ಕಿಬಿದ್ದಿದ್ದು ಅವರನ್ನು ಸುರಕ್ಷಿತವಾಗಿ ರಕ್ಷಿಸುವ ಭರವಸೆಯಿದೆ ಎಂದು ಕಿಮ್ ಹೇಳಿದ್ದಾರೆ. ಈ ಮಧ್ಯೆ, ಉಕ್ರೇನ್ನ ಪ್ರಮುಖ ಬಂದರು ನಗರ ಖೆರ್ಸಾನ್, ಒಡೆಸಾ, ಮಿಕೊಲಾಯಿವ್ ಮತ್ತು ಮರಿಯುಪೋಲ್ ಸಹಿತ ದಕ್ಷಿಣ ಪ್ರಾಂತದ ಮೇಲಿನ ಆಕ್ರಮಣವನ್ನು ರಶ್ಯ ತೀವ್ರಗೊಳಿಸಿದ್ದು ಕಪ್ಪು ಸಮುದ್ರ ಮತ್ತು ಉಕ್ರೇನ್ ನಡುವಿನ ಸಂಪರ್ಕವನ್ನು ಕಡಿತಗೊಳಿಸಿ, ರಶ್ಯದಿಂದ ಕ್ರಿಮಿಯಾದವರೆಗೆ ಕಾರಿಡಾರ್ ನಿರ್ಮಿಸುವ ಉದ್ದೇಶವನ್ನು ರಶ್ಯ ಹೊಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಉಕ್ರೇನ್ಗೆ ಸೇರಿದ ಕ್ರಿಮಿಯಾವನ್ನು 2014ರಲ್ಲಿ ರಶ್ಯ ಸ್ವಾಧೀನಪಡಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News